

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಪಡೆಯದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್ ಈಶ್ವರ್ ಅಯ್ಯರ್ ಸವಾಲೆಸೆದಿರುವುದು, ರಾಜಕೀಯ ವಲಯದಲ್ಲಿ ಹೆಚ್ಚಿನ ಚರ್ಚೆಗೆಗ್ರಾಸವಾಗಿದೆ.
ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಪ್ರದೀಪ್ ಈಶ್ವರ್ ಶಾಸಕರಾಗಿ ಒಂದು ವರ್ಷ ಕಳೆದಿದೆ. ಇದರ ನಡುವೆ ಬಹಿರಂಗವಾಗಿ ಸವಾಲೊಡ್ಡಿ ಶಾಸಕ ಸ್ಥಾನವನ್ನು ಪಣಕ್ಕಿಟ್ಟಿದ್ದಾರೆ. ಇದರಲ್ಲಿ ಗೆಲ್ಲುತ್ತಾರೋ? ಸೋಲುತ್ತಾರೋ? ಮೊದಲು ನುಡಿದಂತೆ ನಡೆದುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಮತ್ತು ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ನಡುವೆ ನೇರ ಹಣಾಹಣಿ ನಡೆದಿದೆ. ಇಬ್ಬರ ಪರವಾಗಿಯೂ ಗೆಲುವಿನ ವಿಶ್ವಾಸ ವ್ಯಕ್ತವಾಗಿದ್ದು ಮತಗಳ ಅಂತರದ ಲೆಕ್ಕಾಚಾರ ಹಾಕಲಾಗುತ್ತಿದೆ.
8 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಲೀಡ್ ಪಡೆಯುವ ವಿಚಾರದಲ್ಲಿ ರಾಜೀನಾಮೆಯ ವಿಚಾರದ ಪಂಥಾಹ್ವಾನವು ಕೇಳಿ ಬಂದಿದೆ. ಅದರಲ್ಲೂ ಸ್ವಯಂ ಶಾಸಕರೇ ಬಹಿರಂಗ ಸವಾಲು ಹಾಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.
*ಚಿಕ್ಕಬಳ್ಳಾಪುರದಲ್ಲಿ ಒಂಟಿ ಪ್ರಚಾರ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸ್ವಪಕ್ಷೀಯ ಮುಖಂಡರನ್ನು ಬದಿಗಿಟ್ಟು ಏಕಾಂಗಿ ನಾಯಕತ್ವದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಪ್ರಚಾರ ಕೈಗೊಂಡಿದ್ದರು. ಇದಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನಾಯಕರು ಸಾಥ್ ನೀಡಿದ್ದರು. ಇದರ ಭಿನ್ನಮತದ ನಡುವೆ ಕ್ಷೇತ್ರದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಲೀಡ್ ಪಡೆಯುವುದು ಪ್ರತಿಷ್ಠೆಯ ವಿಚಾರವಾಗಿದೆ.
ಅನೇಕರು ಚಿಕ್ಕಬಳ್ಳಾಪುರದಲ್ಲಿ ಪಕ್ಷಕ್ಕೆ ಲೀಡ್ ಸಿಗುವುದಿಲ್ಲ. ಬಿಜೆಪಿಯೇ ಮುಂಚೂಣಿಯಲ್ಲಿರುತ್ತದೆ ಎಂದು ಕಾಂಗ್ರೆಸ್ ವಲಯದಿಂದಲೇ ಅನೇಕರು ಹೇಳುತ್ತಿದ್ದಾರೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಮತದಾನ ದಿನಕ್ಕೆ ಎರಡು ದಿನ ಮೊದಲು ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂ ಜಮಾ, ಪಕ್ಷದ ವೋಟ್ ಬ್ಯಾಂಕ್, ವಿವಿಧ ಸಮುದಾಯಗಳ ಬೆಂಬಲದಿಂದ ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂತಲೂ ಕೆಲವರು ವಿಶ್ಲೇಷಿಸುತ್ತಿದ್ದಾರೆ.
*ಲೀಡ್ ಸಿಗೋದು ಯಾರಿಗೆ?
ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಸವಾಲಿನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಸಲಿಗೆ ಲೀಡ್ ಪಡೆಯೋರು ಯಾರು? ಎನ್ನುವ ಕುತೂಹಲದ ಪ್ರಶ್ನೆ ಕೇಳಿ ಬರುತ್ತಿದೆ.
ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಹುಟ್ಟೂರಿನ ಕ್ಷೇತ್ರ ಚಿಕ್ಕಬಳ್ಳಾಪುರ. ಇಲ್ಲಿ 2013, 2018 ರ ವಿಧಾನಸಭೆ ಚುನಾವಣೆ ಮತ್ತು 2019 ರ ಉಪ ಚುನಾವಣೆಯಲ್ಲಿ ದಾಖಲೆಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2023 ರ ಚುನಾವಣೆಯ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಿನ ತಂತ್ರಗಾರಿಕೆಯ ಎದುರು ಸೋಲು ಕಂಡರು. ಇನ್ನು ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಸುಧಾಕರ್ ಮತಗಳಿಕೆ ಪ್ರಮಾಣವು 70 ಸಾವಿರ ಮತಗಳಿಂತಲೂ ಹೆಚ್ಚು.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ 2 ಲಕ್ಷ ಮತದಾರರಿದ್ದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಲದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚಿನ ಮತಗಳು ಸಿಗುವ ಲೆಕ್ಕಾಚಾರ ಹಾಕಲಾಗಿದೆ. ನಗರ, ಪಟ್ಟಣ ಪ್ರದೇಶದ ಜತೆಗೆ ಗ್ರಾಮೀಣ ಭಾಗದಲ್ಲಿ ಸುಧಾಕರ್ ವೈಯಕ್ತಿಕ ವರ್ಚಸ್ಸಿನಿಂದ ಹೆಚ್ಚಿನ ಮತಗಳಿಕೆಯಾಗಿದೆ ಎನ್ನುವುದು ಅವರ ಬೆಂಬಲಿಗರ ಲೆಕ್ಕಾಚಾರ.
*ಪ್ರದೀಪ್ ವಿಶ್ವಾಸದ ಲೆಕ್ಕ
ಹುಟ್ಟೂರು ಪೆರೇಸಂದ್ರದ ಜತೆಗೆ ಮಂಡಿಕಲ್ಲು, ಮಂಚೇನಹಳ್ಳಿ ಭಾಗದಲ್ಲಿಯೇ ಸುಧಾಕರ್‌ಗೆ ಜತೆಯಲ್ಲಿದ್ದು ಅವರ ಪಕ್ಷದವರೇ ಕೈ ಕೊಟ್ಟಿದ್ದಾರೆ. ಏನೇನೋ ಮಾಡಿದರೂ ಸಹ ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವುದಿಲ್ಲ ಎನ್ನುವುದು ಶಾಸಕರ ವಿಶ್ವಾಸ ನುಡಿ.
* ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಸುಧಾಕರ್ ಏನಾದರೂ ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಒಂದು ಮತ ಹೆಚ್ಚಿಗೆ ಪಡೆದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ಸೋಲುತ್ತಾರೆ. ಎಂ.ಎಸ್.ರಕ್ಷಾ ರಾಮಯ್ಯ ಗೆಲ್ಲುತ್ತಾರೆ.
ಪ್ರದೀಪ್ ಈಶ್ವರ್ ಅಯ್ಯರ್, ಶಾಸಕ, ಚಿಕ್ಕಬಳ್ಳಾಪುರ