

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಹೋಬಳಿಯಲ್ಲಿ ಭೂಸ್ವಾಧೀನ ಕೈಬಿಡಬೇಕು ಎಂದು ಒತ್ತಾಯಿಸಿ ಗ್ರಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಮುಂದಿನ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಎಲ್ಲರೂ ಸೇರಿ ರಾಜೀನಾಮೆ ಕೊಡುವ ಮುನ್ಸೂಚನೆ ಕೊಟ್ಟಿದ್ದಾರೆ ಎಂದು ಆನೇಕಲ್ ತಾಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಹಾಗೂ ಮುತ್ತನಲ್ಲೂರು ಗ್ರಾಪಂ ಸದಸ್ಯ ಕೆ.ವಿಶ್ವನಾಥ್ ತಿಳಿಸಿದರು.
ಗುರುವಾರ ಗ್ರಾಪಂ ಅಧ್ಯಕ್ಷೆ ನಾಗರತ್ನಾ ಅವರಿಗೆ ಸದಸ್ಯತ್ವ ರಾಜೀನಾಮೆ ಪತ್ರ ನೀಡಿ ಮಾತನಾಡಿದರು. 2535 ಎಕರೆ 11 ಹಳ್ಳಿಗಳ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕ್ರಮಕ್ಕೆ ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದರು. ಸರ್ಜಾಪುರ ಹೋಬಳಿಯಲ್ಲಿ ಫಲವತ್ತಾದ ಭೂಮಿಯಾಗಿದ್ದರೂ ಅಧಿಕಾರಿಗಳು ಬರಡು ಭೂಮಿ ಎಂದು ಸೂಚಿಸಿ ಜಮೀನನ್ನು ಶ್‌ಟಿ ಸಿಟಿ ಹೆಸರಿನಲ್ಲಿ ಗುಳುಂ ಮಾಡಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿ ಹಣ ಗಳಿಸಲು ತಂತ್ರ ರೂಪಿಸಲಾಗಿದೆ ಎಂದು ದೂರಿದರು, ಒಂದೂವರೆ ವರ್ಷದಿಂದ ಸತತವಾಗಿ ಭೂ ಸ್ವಾಧೀನ ಕೈಬಿಡಬೇಕೆಂದು ಹೋರಾಟ ನಡೆಸುತ್ತಿದ್ದರೂ, ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸುತ್ತಿದ್ದೇವೆ, ಜನ ಪ್ರತಿನಿಧಿಯಾಗಿ ನನಗೆ ನ್ಯಾಯ ಸಿಗಲಿಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಹೆಮ್ಮೆಯ ಸಂಗತಿ:
ಸಮಿತಿ ಸಂಚಾಲಕ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ ಮಾತನಾಡಿ, ಸ್ವತಂತ್ರ ಪೂರ್ವದ ನಂತರ ಅನೇಕ ಜನಪ್ರತಿನಿಧಿಗಳು ಸಾಮಾಜಿಕ ಬದ್ಧತೆ ಹೊಂದಿ ರಾಜೀನಾಮೆ ಸಲ್ಲಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಈ ಸಮಯದಲ್ಲಿ ರೈತರ ಹೋರಾಟಗಳಿಗೆ ಧ್ವನಿಯಾಗದ ಸರ್ಕಾರಗಳ ವಿರುದ್ಧ ನಿಂತು ಅಕ್ರಮದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡದ ಸರ್ಕಾರದ ತೀರ್ಮಾನ ಖಂಡಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರೈತ ಮುಖಂಡ ಗುರುಮೂರ್ತಿ ರೆಡ್ಡಿ, ರಾಜೇಶ್, ಸುನೀಲ್, ಪವನ್, ಮಂಜುನಾಥ ರೆಡ್ಡಿ ಹಾಗೂ ರೈತ ಮುಖಂಡರು ಇದ್ದರು.