ಮಲೆಬೆನ್ನೂರು ಪುರಸಭೆ ಉಳಿತಾಯ ಬಜೆಟ್

29 mbr
Published on

ಮಲೇಬೆನ್ನೂರು: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಹನುಮಂತಪ್ಪ 3.58 ಲಕ್ಷ ರೂ. ಉಳಿತಾಯ ಬಜೆಟ್​ನ್ನು ಮಂಡಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, 2025- 26ನೇ ಸಾಲಿನಲ್ಲಿ ಪುರಸಭೆ ಒಟ್ಟು 21.99 ಕೋಟಿ ರಾಜಸ್ವ ನಿರೀಕ್ಷಿಸಿದ್ದು, 21.96 ಕೋಟಿ ರೂ. ವೆಚ್ಚ ರೂಪಿಸಲಾಗಿದೆ ಎಂದರು.

ಆಯವ್ಯಯ ಪಟ್ಟಿ ರಚಿಸುವ ಮುನ್ನ ಪುರಸಭೆಯ ಸರ್ವ ಸದಸ್ಯರೊಂದಿಗೆ ಸಾಮಾನ್ಯ ಸಭೆ ನಡೆಸಿ ರ್ಚಚಿಸಿಲ್ಲ ಎಂದು ಸದಸ್ಯ ನಯಾಜ್ ಆಕ್ಷೇಪಿಸಿದರು.

ನಾಮನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಅವರು, ಬಜೆಟ್ ಪ್ರತಿಯ ಕೆಲವು ಅಂಶ ಓದಿ ಅದರಲ್ಲಿನ ಲೋಪದೋಷ, ಕಂದಾಯ ಸಂಗ್ರಹಣೆ ಪುನರಾವರ್ತನೆ ಆಗಿರುವುದನ್ನು ಸಭೆ ಗಮನಕ್ಕೆ ತಂದರು. ಜತೆಗೆ ತೆರಿಗೆ ಹಣ ಸದ್ಬಳಕೆ ಮಾಡುವಂತೆ ಸಲಹೆ ನೀಡಿದರು.

ಸಂತೆ ಮೈದಾನದ ಶಿಥಿಲಾವಸ್ಥೆಯಲ್ಲಿರುವ ನೀರಿನಟ್ಯಾಂಕ್ ಒಡೆದು ಹಾಕಲು ಹಾಗೂ ನಿತ್ಯ ಕಂದಾಯ ವಸೂಲಿ ಮಾಡುವ ಪದ್ಧತಿಯನ್ನು ಕೈ ಬಿಟ್ಟು ವಾರಕ್ಕೊಮ್ಮೆ ವಸೂಲಿ ಮಾಡುವಂತೆ ಸದಸ್ಯ ಬೋವಿ ಶಿವಣ್ಣ ಆಗ್ರಹಿಸಿದರು.

ಕಿರಿಯ ಇಂಜಿನಿಯರ್ ರಾಘವೇಂದ್ರ ಪ್ರತಿಕ್ರಿಯಿಸಿ, ಟ್ಯಾಂಕ್ ತೆರವುಗೊಳಿಸುವ ಟೆಂಡರ್ ಪ್ರಕ್ರಿಯ ಮುಕ್ತಾಯ ಹಂತದಲ್ಲಿದ್ದು, ಮುಂದಿನವಾರ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ನೀರಾವರಿ ನಿಗಮದ ಜಮೀನನ್ನು ಪುರಸಭೆ ಕಚೇರಿಗೆ ಪಡೆಯುವ ಕುರಿತು ಚರ್ಚೆ ನಡೆಯಿತು.

ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸಮುದಾಯ ಸಂಘಟನಾಧಿಕಾರಿ ದಿನಕರ್, ಪರಿಸರ ಇಂಜಿನಿಯರ್ ಉಮೇಶ್, ಕಂದಾಯ ಅಧಿಕಾರಿ ಧನಂಜಯ್, ಸದಸ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net