ಸುರಕ್ಷಿತ ಪ್ರದೇಶದತ್ತ ನಿವಾಸಿಗಳು

17adarshkdga1 (1)
Published on

ಮಡಿಕೇರಿ: ಮುಂಗಾರು ಮಳೆ ಅಬ್ಬರಿಸುವ ಮೊದಲೇ ಅಪಾಯದ ಸ್ಥಿತಿಯಲ್ಲಿರುವ ನಗರದ ನಿವಾಸಿಗಳು ಎಚ್ಚೆತ್ತು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ಹೌದು, ಮಳೆಗಾಲ ಶುರುವಾಗುತ್ತಿದ್ದಂತೆಯೇ ಅಪಾಯಕಾರಿ ಪ್ರದೇಶಗಳಲ್ಲಿ ಇರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ನೊಟೀಸ್ ಜಾರಿ ಮಾಡುವುದು… ಅದನ್ನ ನಿರ್ಲಕ್ಷಿಸುವುದು…. 2 ವರ್ಷಗಳ ಹಿಂದಿನವರೆಗೆ ಇದೊಂದು ಸಂಪ್ರದಾಯದಂತೆ ಜಿಲ್ಲೆಯಲ್ಲಿ ನಡೆದು ಬಂದಿತ್ತು. ಆದರೆ 2018ರ ಭೂಕುಸಿತ ಮತ್ತು 2019ರ ಪ್ರವಾಹದಿಂದಾಗಿ ಇದು ಬದಲಾಗಿದ್ದು, ಯಾರು ಹೇಳದಿದ್ದರೂ ಅಪಾಯಕಾರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿ, ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಈಗಾಗಲೇ ಮಳೆ ಸುರಿಯಲು ಆರಂಭಿಸಿದೆ. ಅಲ್ಲದೆ ಮುಂಗಾರು ಜಿಲ್ಲೆಗೆ ಕಾಲಿಟ್ಟಿರುವುದನ್ನು ಹವಾಮಾನ ಇಲಾಖೆ ಖಚಿತಪಡಿಸಿದ್ದು, ಬೆಟ್ಟ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರ ಆತಂಕಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳ ಅನಾಹುತದ ಭಯ ಕಾಡುತ್ತಿರುವುದರಿಂದ ಮಡಿಕೇರಿ ಮತ್ತಿತರ ಕಡೆಗಳಲ್ಲಿ ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವ ಮನೆಗಳಿಗೆ ತಮ್ಮ ವಾಸ ಬದಲಿಸಲು ಆರಂಭಿಸಿದ್ದಾರೆ.

ಸ್ವ-ಇಚ್ಛೆಯಿಂದ ಮನೆ ಖಾಲಿ: ಮಡಿಕೇರಿಯ ಎತ್ತರ ಮತ್ತು ಇಳಿಜಾರು ಪ್ರದೇಶಗಳಲ್ಲಿ ಇರುವ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಮತ್ತಿತರ ಅಪಾಯಕಾರಿ ಪ್ರದೇಶಗಳ ನಿವಾಸಿಗಳು ತಾವಿರುವ ಮನೆಗಳನ್ನು ತಾತ್ಕಾಲಿಕವಾಗಿ ಬದಲಿಸುತ್ತಿದ್ದಾರೆ. ಮೊದಲೆಲ್ಲ ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಜಿಲ್ಲಾಡಳಿತ ಸೂಚಿಸಿದರೂ ಹೆಚ್ಚಿನವರು ಆದೇಶ ಪಾಲಿಸುತ್ತಿರಲಿಲ್ಲ. ಆದರೆ, ಈ ವರ್ಷ ನೊಟೀಸ್ ಕೈ ಸೇರುತ್ತಿದ್ದಂತೆ ಮನೆ ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ.

ದುಬಾರಿ ಬಾಡಿಗೆ: ಮಡಿಕೇರಿಯಲ್ಲಿ ಮನೆಗಳ ಬಾಡಿಗೆ ದರ ಹೆಚ್ಚಾಗುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಸಿಂಗಲ್ ಬೆಡ್‌ರೂಮ್‌ನ ಮನೆಗಳಿಗೆ 3-4 ಸಾವಿರ ಇದ್ದಿದ್ದು ಈಗ 6 ಸಾವಿರಕ್ಕೂ ಹೆಚ್ಚಾಗಿದೆ. ಡಬಲ್ ಬೆಡ್‌ರೂಮ್ ಮನೆಗಳಿಗೆ 6-7 ಸಾವಿರ ಇದ್ದಿದ್ದು 10 ಸಾವಿರವನ್ನೂ ಮೀರಿದೆ ಎನ್ನಲಾಗುತ್ತಿದೆ. ಅಪಾಯಕಾರಿ ಸ್ಥಳದಲ್ಲಿ ಇರುವವರು ಸಾಮಾನ್ಯವಾಗಿ ಕೂಲಿಕಾರ್ಮಿಕರೇ ಆಗಿದ್ದು, ಮಳೆಗಾಲದಲ್ಲಿ ಕೆಲಸವೂ ಇರುವುದಿಲ್ಲ. ಇದರಿಂದ ದೈನಂದಿನ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಇನ್ನು ದುಬಾರಿ ಬಾಡಿಗೆಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದಾರೆ.

ಎಲ್ಲೆಲ್ಲಿ ಅಪಾಯ: ನಗರದ ಮಂಗಳದೇವಿನಗರ, ಚಾಮುಂಡೇಶ್ವರಿನಗರ, ಇಂದಿರಾನಗರ, ಮಲ್ಲಿಕಾರ್ಜುನನಗರ, ಜ್ಯೋತಿನಗರಗಳಲ್ಲಿ 2018 ಮತ್ತು 19ರಲ್ಲಿ ಮಳೆಗೆ ಮನೆಗಳು ಕುಸಿದಿದ್ದವು. ಸುಮಾರು 80ಕ್ಕೂ ಹೆಚ್ಚಿನ ಮನೆಗಳು ನೆಲಕಚ್ಚಿದ್ದವು. ಈ ಹಿನ್ನೆಲೆ ಅಪಾಯವನ್ನರಿತ ಕುಟುಂಬಗಳು ಮಳೆ ಆರಂಭದಲ್ಲೇ ಮನೆ ಖಾಲಿ ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಸಜ್ಜು: ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆ ಅದನ್ನು ಎದುರಿಸಲು ಸಜ್ಜುಗೊಂಡಿರುವ ಕೊಡಗು ಜಿಲ್ಲಾಡಳಿತ ಗುಡ್ಡ ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟಿಸ್ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ರ‌್ಯಾಪಿಡ್ ರೆಸ್ಪಾನ್ಸ್ ಟೀಂ ಕೂಡ ರಚಿಸಲಾಗಿದೆ. ಜತೆಗೆ ಅಗ್ನಿಶಾಮಕ ದಳದ ವತಿಯಿಂದಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಇಂದಿರಾನಗರ ಹಾಗೂ ಚಾಮುಂಡೇಶ್ವರಿನಗರ, ಮಂಗಳಾದೇವಿನಗರದಲ್ಲಿ ಸುಮಾರು 150ಕ್ಕೂ ಅಧಿಕ ಮನೆಗಳನ್ನು ಗುರುತಿಸಲಾಗಿದೆ. ಈಗಾಗಲೇ 40ಕ್ಕೂ ಹೆಚ್ಚಿನ ಮನೆಗಳಿಗೆ ಸೂಕ್ತ ಪ್ರದೇಶಕ್ಕೆ ತೆರಳುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೆ ಜೂ. 4ರಂದು ಆಯೋಜಿಸಿದ್ದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು, ಕಂದಾಯ ಸಚಿವರು ನಗರದ 123 ನಿವಾಸಿಗಳಿಗೆ ಸಂತ್ರಸ್ತರ ಮನೆ ಹಸ್ತಾಂತರ ಮಾಡಿದ್ದಾರೆ. ಅವರು ಕೂಡ ಖಾಲಿ ಮಾಡುತ್ತಿದ್ದಾರೆ ಎಂದು ನಗರಸಭೆ ಕಂದಾಯಾಧಿಕಾರಿ ತಾಹಿರ್ ವಿಜಯವಾಣಿಗೆ ತಿಳಿಸಿದ್ದಾರೆ.

ಜಂಬೂರಿಗೆ ಬಸ್ ವ್ಯವಸ್ಥೆ ಕಲ್ಪಿಸಿ: ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ಇತ್ತೀಚೆಗೆ ಉಸ್ತುವಾರಿ ಸಚಿವರು, ಕಂದಾಯ ಸಚಿವರು 2018ರಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿದರು. ಸರ್ಕಾರ ನೀಡಿದ ಮನೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿ ಗೃಹವನ್ನು ಈಗಾಗಲೇ ಸೇರಿಕೊಳ್ಳುತ್ತಿದ್ದಾರೆ. ಆದರೆ ಜಂಬೂರಿನಿಂದ ನಗರಕ್ಕೆ ಬರಲು-ಹೋಗಲು ಬಸ್ ವ್ಯವಸ್ಥೆ ಇಲ್ಲ. ಇದರಿಂದ ನಗರಕ್ಕೆ ಬರಲು ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಂಬೂರಿನಲ್ಲಿ ಮನೆ ಪಡೆದ ಸಂತ್ರಸ್ತ ಟಿ.ಕೆ.ಅಚ್ಯುತ ಮನವಿ ಮಾಡಿದ್ದಾರೆ.

ಮಂಗಳಾದೇವಿನಗರ, ಚಾಮುಂಡೇಶ್ವರಿನಗರ, ಇಂದಿರಾನಗರ ಹೆಚ್ಚಿನ ಅಪಾಯದಲ್ಲಿರುವ ಬಡಾವಣೆಗಳಾಗಿವೆ. ಆದ್ದರಿಂದ ಇಲ್ಲಿನ ನಿವಾಸಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗುತ್ತಿದೆ.
> ಎಂ.ಎ.ತಾಹೀರ್, ಕಂದಾಯಾಧಿಕಾರಿ, ನಗರಸಭೆ

ಮಡಿಕೇರಿಯ ಇಂದಿರಾನಗರದಲ್ಲಿದ್ದ ಮನೆ ಈಗಾಗಲೇ ಬಿರುಕು ಬಿಟ್ಟಿದೆ. ಆದ್ದರಿಂದ ಸರ್ಕಾರ ಜಂಬೂರಿನಲ್ಲಿ ನೀಡಿರುವ ಮನೆಗೆ ಸ್ಥಳಾಂತರ ಮಾಡುತ್ತಿದ್ದೇವೆ. ಅಲ್ಲದೆ ಸರ್ಕಾರ ನೀಡಿರುವ ಮನೆ ಸುಂದರವಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಆದರೆ ನಗರಕ್ಕೆ ಬರಲು ಬಸ್ ವ್ಯವಸ್ಥೆ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಬೇಕು.
> ಟಿ.ಕೆ.ಅಚ್ಯುತ, ಇಂದಿರಾ ನಗರ ನಿವಾಸಿ

ಪೋಟೋಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net