ಮೈಸೂರು: ಮೈಸೂರು ಪೂರ್ವ ವಲಯ ಬಡಾವಣೆಗಳು ಮೂಲ ಸೌಕರ್ಯ ಕೊರತೆ, ಭದ್ರತೆ ಕೊರತೆ ಕಾರಣ ಕಳ್ಳಕಾಕರ ಹಾವಳಿ, ಮದ್ಯವ್ಯಸನಿಗಳ ಪಿಡುಗಿನಿಂದ ಸಮಸ್ಯೆ ಎದುರಿಸುತ್ತಿವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಬಡಾವಣೆ ನಿವಾಸಿಗಳಿಗೆ ಇನ್ನೂ ಗಡಸು ನೀರು ಪೂರೈಕೆಯಾಗುತ್ತಿದೆ. ಹೀಗಾಗಿ, ಅಮೃತ್ ಯೋಜನೆ ಹಾಗೂ ಜಲಜೀವನ್ ಮಿಷನ್ ಸೌಲಭ್ಯ ಕಲ್ಪಿಸಬೇಕು. ಒಳಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಬೇಕು, ಸರ್ಕಾರಿ ಶಾಲೆ, ಅಂಚೆ ಕಚೇರಿ, ಆಸ್ಪತ್ರೆ, ಆಟದ ಮೈದಾನ ವ್ಯವಸ್ಥೆಗೆ ಮುಂದಾಗಬೇಕು. ಬೃಹತ್ ಮೈಸೂರಿಗೆ ಈ ಬಡಾವಣೆಗಳು ಸಹ ಸೇರ್ಪಡೆಯಾಗಬೇಕು ಎಂದು ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೊರ ವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅಪಘಾತ ಸಂಭವಿಸುತ್ತಿವೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ನಿರ್ಜನ ಪ್ರದೇಶಗಳಲ್ಲಿ ಮದ್ಯವ್ಯಸನಿಗಳು ಮದ್ಯ ಸೇವಿಸಿ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟವೂ ಇಲ್ಲಿ ನಡೆಯುತ್ತಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಕೋರಿದರು.
ಜಿಲ್ಲೆಯವರೇ ಅದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಬಂಧಪಟ್ಟ ಎಲ್ಲರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಆರ್.ನರಸಿಂಹಯ್ಯ, ಸಿದ್ದು, ಶಿವಕುಮಾರಸ್ವಾಮಿ, ಡಿ.ಆರ್.ಜಯಸ್ವಾಮಿ, ಸಿದ್ದರಾಜೇಗೌಡ, ಬೊಮ್ಮೇಗೌಡ, ಶಿವಣ್ಣ, ಥಾಮಸ್ ಇತರರು ಇದ್ದರು.