

ಚಿಕ್ಕಮಗಳೂರು: ಕಬ್ಬಿಣ ಸೇತುವೆ ಗ್ರಾಮದ ರಸ್ತೆ ಮತ್ತು ಚರಂಡಿಯನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಸರಿಪಡಿಸಲು ಸಂಬAಧಿಸಿದವರು ಮುಂದಾಗುತ್ತಿಲ್ಲ ಎಂದು ಕಬ್ಬಿಣ ಸೇತುವೆ ಗ್ರಾಮದ ಮೂರನೇ ತಿರುವಿನ ನಿವಾಸಿಗಳು ದೂರಿದ್ದಾರೆ.
ತಾಲೂಕಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಣ ಸೇತುವೆ ಭಾಗದಲ್ಲಿ ವಾಸಿಸುತ್ತಿರುವ ಮೂರನೇ ತಿರುವಿನ ನಿವಾಸಿಗಳು ಕಳೆದ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಗ್ರಾಮದ ರಸ್ತೆಗಳನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಕಿಂಚಿತ್ತು ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕಿರಿದಾದ ರಸ್ತೆಯಲ್ಲಿ ಓಡಾಡುವುದೆ ಕಷ್ಟವಾಗಿದ್ದು, ಇದರ ಜೊತೆಗೆ ಕಲ್ಲು, ಡಸ್ಟ್ ಸೇರಿದಂತೆ ಇತರೆ ವಸ್ತುಗಳನ್ನು ರಸ್ತೆಗೆ ಹಾಕಿರುವುದರಿಂದ ಜನರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಚರಂಡಿ ತುಂಬಾ ಮಣ್ಣು ತುಂಬಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆ ಗುಂಡಿಯಾಗಿರುವುದರಿAದ ನೀರು ಅಲ್ಲಿಯೇ ನಿಂತಿದ್ದು, ಇದರಿಂದ ರೋಗ ರುಜಿನಗಳು ಹರಡುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಡೆಂಘೆ ಹರಡುತ್ತಿದ್ದು, ಸೊಳ್ಳೆಗಳು ನಿಂತ ನೀರಿನಲ್ಲಿ ವಾಸಿಸುತ್ತಿವೆ. ಇದರಿಂದ ಈ ಭಾಗದ ಜನರಿಗೆ ರೋಗ ಹರಡುವ ಭಯ ಕಾಡುತ್ತಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಈ ಭಾಗದ ಚರಂಡಿ ಮತ್ತು ರಸ್ತೆಗಳನ್ನು ಸರಿಪಡಿಸುವಂತೆ ಗ್ರಾಮ ಪಂಚಾಯಿತಿಯನ್ನು ನಿವಾಸಿಗಳು ಒತ್ತಾಯಿಸಿದ್ದಾರೆ.