ಆದಿಹಳ್ಳಿಯಲ್ಲಿ ಶೀಘ್ರ ವಸತಿ ಶಾಲೆ ಆರಂಭ

ಗಂಡಸಿ ಹೋಬಳಿಯ ಆದಿಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ದೇವಿಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
ಗಂಡಸಿ ಹೋಬಳಿಯ ಆದಿಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ದೇವಿಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
Published on

ಅರಸೀಕೆರೆ ಗ್ರಾಮಾಂತರ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಬೆಳಕಿಗೆ ತನ್ನದೆ ಆದ ಮಹತ್ವವಿದ್ದು, ಸೂರ್ಯನ ಬೆಳಕಿನಿಂದ ಕತ್ತಲನ್ನು ಓಡಿಸುವ ಮೂಲಕ ದೇವಾನುದೇವತೆಗಳ ದರ್ಶನ ಪಡೆದ ನಾವು ಧನ್ಯರು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಗಂಡಸಿ ಹೋಬಳಿಯ ಆದಿಹಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ಶ್ರೀ ಆದಿಮಹಾಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವ, ನೂತನ ದೇವಾಲಯ ಲೋಕಾರ್ಪಣೆ ಮತ್ತು 127ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರಿನ ಹುಣ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನೂರು ವರ್ಷ ಬದುಕಲು ಬಂದ ನಾವು ಸ್ವಯಂಕೃತ ತಪ್ಪುಗಳಿಂದ ಅಲ್ಪಾಯುಷಿಗಳಾಗುತ್ತಿದ್ದೇವೆ ಎಂದು ವಿಷಾದಿಸಿದರು.

ಆದಿಹಳ್ಳಿ ಗ್ರಾಮವಲ್ಲ. ಬದಲಾಗಿ ಧಾರ್ಮಿಕ ಶಕ್ತಿಯುಳ್ಳ ಪುಣ್ಯಕ್ಷೇತ್ರ. ಹಾಗಾಗಿ ಬಾಲಗಂಗಾಧರನಾಥ ಶ್ರೀಗಳು ಆರಂಭಿಸಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಮುಂದುವರಿದಿವೆ ಎಂದ ಅವರು, ಗ್ರಾಮಸ್ಥರ ಅಪೇಕ್ಷೆಯಂತೆ ಇಲ್ಲಿ ವಸತಿ ಶಾಲೆ ಆರಂಭಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಆದಿಚುಂಚನಗಿರಿ ಮಠಕ್ಕೂ, ನನಗೂ ಭಾವನಾತ್ಮಕ ಸಂಬಂಧವಿದೆ. ಶ್ರೀ ಮಠದ ಮಾರ್ಗದರ್ಶನ ನನ್ನ ರಾಜಕೀಯ ಜೀವನಕ್ಕೆ ಪ್ರೇರಣೆ ನೀಡಿದೆ. ಈ ಕ್ಷೇತ್ರ ನನ್ನ ವ್ಯಾಪ್ತಿಯಲ್ಲಿರುವುದು ನನ್ನ ಅದೃಷ್ಟ ಎಂದರು.

ದೇಶದ ಭವಿಷ್ಯ ಉಜ್ವಲವಾಗುವಲ್ಲಿ ಮಠಮಾನ್ಯಗಳ ಕೊಡುಗೆ ಅಪಾರವಾದದ್ದು. ಗ್ರಾಮಸ್ಥರು ಶ್ರೀ ಮಠದೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂದರು.

ಇದಕ್ಕೂ ಮುನ್ನ ಶ್ರೀ ಆದಿಮಹಾಲಕ್ಷ್ಮೀ ಅಮ್ಮನವರ ದಿವ್ಯ ಮಹಾರಥೋತ್ಸವ ನೆರವೇರಿತು. ಕೊಡಗು ಮತ್ತು ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net