ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ವಸತಿ ಶಾಲೆಗಳ ನೌಕರರು

29 HANUR 6
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಪ್ರಗಾಶ್ ನಾಥನ್, ಸೋಮಶೇಖರ್, ಲಾಲುನಾಯಕ್, ಸಿದ್ದಪ್ಪ ಇತರರು ಇದ್ದರು.
Published on

ಹನೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ವಸತಿ ಶಾಲೆಗಳ ನೌಕರರ ಸಂಘದ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ತಾಲೂಕಿನ ಹೂಗ್ಯಂ, ರಾಮಾಪುರ ಹಾಗೂ ಹನೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ನೌಕರರು ಮಾತನಾಡಿ, ಕ್ರೈಸ್‌ಅಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ನಿರ್ವಹಣೆಗೆ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸೌಕರ್ಯ ಸಿಗುವುದರ ಜತೆಗೆ ಕಾಯಂ ಶಿಕ್ಷಕರು ಹಾಗೂ ನೌಕರರಿಗೆ ಸವಲತ್ತು ಸಿಗಲಿದೆ ಎಂದು ಹೇಳಿದರು.

ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಕ್ಕೆ ಅನುಮೋದನೆ ನೀಡಬೇಕು. ಸರ್ಕಾರಿ ನೌಕರರಿಗೆ ನಗದು ಚಿಕಿತ್ಸೆ ನೀಡುವ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಹಾಗೂ ವಿಶೇಷ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೇ 28ರಿಂದ 30ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೌಕರರು ಧರಣಿ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಭರವಸೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮೇ 30ರಿಂದ ತರಗತಿ ಬಹಿಷ್ಕರಿಸಿ ಅಸಹಕಾರ ವ್ಯಕ್ತಪಡಿಸಲಾಗುವುದು. ಮೇ 31 ರಂದು ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಸಲ್ಲಿಸಲಾಗುವುದು. ಜೂ.2 ರಿಂದ ವಸತಿ ಶಾಲೆಗಳ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಾಂಶುಪಾಲ ಪ್ರಗಾಶ್ ನಾಥನ್, ಶಿಕ್ಷಕರಾದ ಸೋಮಶೇಖರ್, ಲಾಲುನಾಯಕ್, ಸಿದ್ದಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net