

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಸತಿ ಶಾಲೆಗಳ ನೌಕರರು ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ನೌಕರರು, ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಗಳ ಖಾಯಂ ಶಿಕ್ಷಕರು, ನೌಕರರು ಹಲವು ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದನ್ನು ನಿರ್ಲಕ್ಷೃ ವಹಿಸಿದೆ. ಇದರಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ತುಂಬ ಅನಾನುಕೂಲವಾಗಿದೆ ಎಂದು ಆರೋಪಿಸಿದರು.
ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು. ಮರಣ ಮತ್ತು ನಿವೃತ್ತ ಉಪದಾನ ಸೌಲಭ್ಯ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು. ಹೆಚ್ಚುವರಿ ಕಾರ್ಯಭಾರ ಇರುವುದರಿಂದ ಶೇ.10 ರಷ್ಟು ವಿಶೇಷ ಭತ್ಯೆ ಮಂಜೂರಾತಿ ನೀಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನೌಕರರಾದ ಪ್ರಸಾದ್, ದೀಪಕ್, ಸಂತೋಷ್‌ಕುಮಾರ್, ನವೀನ್, ಸುರೇಶ್, ಟಿ.ಕೆ.ಸ್ವಾಮಿ, ಅಭಿಲಾಷ್, ಗುರುಮೂರ್ತಿ, ಉಷಾ, ಶಿಲ್ಪಾ, ಭವ್ಯಾ, ಚೇತನಾ, ಶಕುಂತಲಾ, ಮುನೀರ್ ಪಾಷಾ, ಕಾಂತರಾಜು, ಗಿರೀಶ್ ಭಾಗವಹಿಸಿದ್ದರು.