

ಕುಮಟಾ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾದ್ಯಂತ ಗುರುವಾರ ಎಲ್ಲ 24 ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದು ಶುಕ್ರವಾರ ತರಗತಿಗಳನ್ನು ನಡೆಸದೇ ಅಸಹಕಾರ ತೋರಲಾಗುತ್ತದೆ ಎಂದು ವಸತಿ ಶಾಲೆಗಳ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಲಕ್ಷ್ಮೀ ಶೆಟ್ಟಿ, ಜಿಲ್ಲಾಧ್ಯಕ್ಷ ಶಂಕರ ಕುರುಬರ ತಿಳಿಸಿದ್ದಾರೆ.
‘ಈಗಾಗಲೇ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಮೇ 26 ರಿಂದ ಸಂವಿಧಾನಾತ್ಮಕ ಸತ್ಯಾಗ್ರಹ ಕೈಗೊಂಡಿದ್ದೇವೆ. ಬೇಡಿಕೆಗಳು ಈಡೇರುವ ತನಕ ವಿವಿಧ ರೂಪದಲ್ಲಿ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.
ವಸತಿ ಶಿಕ್ಷಣ ನಿರ್ದೇಶನಾಲಯ ರಚಿಸುವುದು, ಜ್ಯೋತಿ ಸಂಜೀವಿನಿ ಅನುಷ್ಠಾನ, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು, ಮನೆ ಬಾಡಿಗೆ ಕಡಿತದಿಂದ ವಿನಾಯಿತಿ ನೀಡುವುದು ಮತ್ತು ಶೇ. 10 ವಿಶೇಷ ಭತ್ಯೆ ಮಂಜೂರಾತಿಯ ಬೇಡಿಕೆಯೊಂದಿಗೆ ಶಾಲೆಯ ಪ್ರಥಮ ದಿನ ಕಪ್ಪು ಪಟ್ಟಿ ಕಟ್ಟಿಕೊಂಡು ಶಾಲೆಗೆ ಶಿಕ್ಷಕರು ಸಿಬ್ಬಂದಿ ಹಾಜರಾದರು.
ಮೇ 31 ರಂದು ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದು. ಬೇಡಿಕೆ ಈಡೇರದಿದ್ದರೆ ಜೂನ್ 2 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.