ವಸತಿ ಶಾಲೆ ಕಟ್ಟಡ ಅನುಮೋದನೆಗೆ ಶಾಸಕಿ ನಿರ್ಲಕ್ಷ್ಯ

dvd srinivas
ಶ್ರೀನಿವಾಸ್
Published on

ದೇವದುರ್ಗ: ಪಟ್ಟಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗೆ ಜಾಗ ಲಭ್ಯವಿದ್ದರೂ ಕಟ್ಟಡ ನಿರ್ಮಿಸಲು ಶಾಸಕಿ ಕರೆಮ್ಮ ನಾಯಕ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶ್ರೀನಿವಾಸ್ ಕೊಪ್ಪರ ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ ಖಾಸಗಿ ಕಟ್ಟಡದಲ್ಲಿ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆ ನಡೆಯುತ್ತಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಸ್ವಂತ ಕಟ್ಟಡವಿಲ್ಲದೆ ಕಲಿಕೆಗೆ ಸಮಸ್ಯೆಯಾಗಿದೆ.

ಹೊಸ ಕಟ್ಟಡ ನಿರ್ಮಿಸಲು ಕರ್ನಾಟಕ ಪಬ್ಲಿಕ್ ಶಾಲೆ ಸಮೀಪದ ಸರ್ವೇ ನಂ. 271/*/2ರಲ್ಲಿ ಎರಡು ಎಕರೆ ಜಾಗ ಲಭ್ಯವಿದೆ. ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕಿ ಕರೆಮ್ಮ ನಾಯಕಗೆ ಸಮಾಜದ ಮುಖಂಡರು ಭೇಟಿ ನೀಡಿ ಮನವಿ ಮಾಡಿದ್ದಾರೆ. ಆದರೆ, ಶಾಸಕಿ ಸ್ಪಂದಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬಿಇಒ ಭೇಟಿಯಾಗಿ ಮಾತುಕತೆ ನಡೆಸಿ ಎಂದು ಹೇಳುತ್ತಿದ್ದಾರೆ.

ಆದರೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಟ್ಟಡ ಆಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಟ್ಟಡ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಲಭ್ಯವಿದ್ದು ಶಾಸಕರು ಜಾಗಕ್ಕೆ ಅನುಮೋದ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಸೈಯದ್ ಮುಸಾ, ಶಂಶುದ್ದೀನ್, ರಾಜಾಸಾಬ್, ಬಾವುದ್ದೀನ್ ಖುರೇಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net