

ಕೆ.ಜಿ.ಎಫ್: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ತವರೂರಾದ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಶಾಲೆಯ ಕಟ್ಟಡ ನಿಮಾರ್ಣಕ್ಕೆ ಶಾಸಕಿ ರೂಪಕಲಾ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಕ್ಯಾಸಂಬಳ್ಳಿ ಹೋಬಳಿ, ಮಜರಾ ಗುಟ್ಟಹಳ್ಳಿ ಗ್ರಾಮದ ಸರ್ವೇ ನಂ.6ರ 8 ಎಕೆರೆ ಜಾಗದಲ್ಲಿ ವಸತಿ ಶಾಲೆ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಶಾಸಕಿ, ರಾಜ್ಯ ಸರ್ಕಾರ ರಾಜ್ಯದಲ್ಲಿ 20 ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಗೆ ಒಂದು ವಸತಿ ಶಾಲೆ ನೀಡಿದ್ದು, ಸರ್ಕಾರಕ್ಕೆ ಬೇಡಿಕೆಯನ್ನೂ ಇಟ್ಟಿದ್ದೆ, ಇದು ನನ್ನ ಕನಸಿನ ಕೂಸಾಗಿತ್ತು ಎಂದರು.
ಕೆಜಿಎಫ್ ತಾಲೂಕಿನಲ್ಲಿ ಈಗಾಗಲೇ 2 ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಕ್ಯಾಸಂಬಳ್ಳಿ ಹೋಬಳಿ ಹಿಂದುಳಿದ ಹೋಬಳಿಯಾಗಿದ್ದ ಕಾರಣ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಒಂದು ಉತ್ತಮ ಅವಕಾಶ. ಹೋಬಳಿಯಲ್ಲಿ ವಸತಿ ಶಾಲೆಗಳು ಪ್ರಾರಂಭಿಸುವುದು ಬಹಳ ದಿನಗಳ ಪ್ರಯತ್ನವಾಗಿತ್ತು ಎಂದರು.
ತಾಲೂಕಿನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಕ್ಯಾಸಂಬಳ್ಳಿ ಗಡಿಭಾಗದಲ್ಲಿರುವುದರಿಂದ ಮುಜರಾ ಗುಟ್ಟಹಳ್ಳಿ ಬಳಿ ವಸತಿ ಶಾಲೆ ಪ್ರಾರಂಭದಿಂದ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸರ್ವೇ ನಂ.6ರಲ್ಲಿರುವ 8 ಎಕೆರೆ ಜಮೀನನ್ನು ವಸತಿ ಶಾಲೆ ನಿರ್ಮಿಸಲು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ವಸತಿ ಶಾಲೆ ನಿಮಾರ್ಣ ಕಾರ್ಯ ಕೈಗೆತ್ತಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ರೂ.
ಕೆಜಿಎಫ್-:ಕನ್ನಡದ ಕೆಲಸಗಳಿಗೆ ಯಾರೂ ಅಡ್ಡಿಪಡಿಸಬಾರದು, ಕನ್ನಡ ಕಟ್ಟುವ ಕೆಲಸ ಹೃದಯವಂತಿಕೆಯಿಂದ ಮಾಡಬೇಕಿದ್ದು, ಕನ್ನಡ ಭವನ ನಿಮಾರ್ಣಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ.ಅನುದಾನ ನೀಡುತ್ತಿರುವುದಾಗಿ ಶಾಸಕಿ ಎಂ.ರೂಪಕಲಾ ಹೇಳಿದರು. ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 69ನೇ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಿತ್ಯ ನಿರಂತರವಾಗಿ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲು ಗಡಿನಾಡು ಕಾವಲು ಸಮಿತಿ ರಚಿಸಿ ಕನ್ನಡ ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಸಭೆಯಲ್ಲಿ ಹಿರಿಯ ಸಾಹಿತಿಗಳು, ಸಂಘ&ಸಂಸ್ಥೆಗಳ ಮುಖಂಡರು ನಾಡಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿರುವುದು ಸಂತಸ ತಂದಿದೆ ಎಂದರು. ನಗರದ ಪ್ರಮುಖ ರಸ್ತೆಗಳಲ್ಲಿ ಹೆಸರಾಂತ ಸಾಹಿತಿ, ಕವಿ,ಹೋರಾಟಗಾರರ ಹೆಸರುಗಳ ನಾಮಫಲಕ ಹಾಕುವ ಮೂಲಕ ಗಣ್ಯರ ಹೆಸರು ಉಳಿಸುವ ಕೆಲಸ ಮಾಡಲಾಗುತ್ತದೆ ಎಂದರು. ಕನ್ನಡ ಭವನ ನಿಮಾರ್ಣಕ್ಕೆ 25ಲಕ್ಷ ರೂ.ಅನುದಾನವನ್ನು ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ರೆಡ್ಡಿಗೆ ಹಸ್ತಾಂತರಿಸಿದರು. ಕನ್ನಡಪರ ಹೋರಾಟಗಾರ ವಿ.ಎಸ್.ಪ್ರಕಾಶ್ ಮಾತನಾಡಿ, ನಗರದಲ್ಲಿ ಕನ್ನಡ ಭಾಷೆ ಹೋರಾಟದ ಮೂಲಕ ಕಟ್ಟಿ ಬೆಳೆಸಲಾಗಿದೆ. ನಗರಸಭೆಯಿಂದ ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ಕುವೆಂಪು ಅವರ ಪ್ರತಿಮೆ ಸ್ವಾಗತ ಕಮಾನಿನ ಮೇಲೆ ಹಾಕಿರುವುದರಿಂದ ಅವರ ಹುಟ್ಟು ಹಬ್ಬದಂದು ಮಾಲಾರ್ಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಮೆಗೆ ಮಾರ್ಲಾಪಣೆ ಮಾಡಲು ವ್ಯವಸ್ಥೆ ಮಾಡಬೇಕು. ನಗರಸಭೆ ಕಚೇರಿಯಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು. ಪ್ರಮುಖ ರಸ್ತೆಗಳಿಗೆ ಹಿಂದೆ ಇಡಲಾಗಿದ್ದ ಹೆಸರುಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಸಂಘದ ಉಪಾಧ್ಯಕ್ಷ ತ್ಯಾಗರಾಜ್, ಲೋನಿ, ಶೇಖರಪ್ಪ, ಸಿಡಿಪಿಒ ರಾಜೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.