

ನಾಪೋಕ್ಲು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಘಟಕ , ಸಂಪಾಜೆ ಸ್ಥಳೀಯ ಸಂಸ್ಥೆ, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗ, ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ಎಕ್ಸೆಲ್ ಪಬ್ಲಿಕ್ ಶಾಲೆ, ಅಂಕುರ್ ಪಬ್ಲಿಕ್ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಸನಿವಾಸ -2023 ಶಿಬಿರ ಯಶಸ್ವಿಯಾಯಿತು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಪಾಜೆ ವಿಭಾಗದ ಸಂಸ್ಥೆ ಅಧ್ಯಕ್ಷ ಎಂ.ಧನಂಜಯ, ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ರೂಪುಗೊಳ್ಳುವುದರೊಂದಿಗೆ ಜೀವನದ ಕೌಶಲಗಳನ್ನು ತಿಳಿದು ಬಾಳಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ಸಿಗಲಿದೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ, ಮಕ್ಕಳು ಬಾಲ್ಯದಲ್ಲಿಯೇ ಶಿಸ್ತು ಮತ್ತು ಮೌಲ್ಯಗಳನ್ನು ರೂಪಿಸಿಕೊಳ್ಳಲು ಇಂತಹ ಶಿಬಿರ ಸಹಕಾರಿ. ಬೌದ್ಧಿಕ ಮತ್ತು ಮಾನಸಿಕ ಅರೋಗ್ಯ ಉತ್ತಮವಾಗಿದ್ದರೆ ಪ್ರತಿ ಮಗು ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸೋಪಾನ ಮತ್ತು ತೃತೀಯ ಸೋಪಾನ ಪರೀಕ್ಷೆಗಳ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವೀರ ಯೋಧ ಕ್ಯಾ.ಪ್ರಾಂಜಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅರ್ಜುನ ಆನೆ ಮತ್ತು ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗೈಡ್ಸ್ ವಿಭಾಗದ ಜಿಲ್ಲಾ ಆಯುಕ್ತೆ ಸುಲೋಚನಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚಂದ್ರಕಲಾ, ಎಸ್‌ಡಿಎಂಸಿ ಸದಸ್ಯೆ ಜ್ಯೋತಿ, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಮತ್ತು ಶಿಬಿರದ ನಾಯಕ ಕೆ.ಯು.ರಂಜಿತ್, ಕಾರ್ಯದರ್ಶಿ ಕೆ.ಬಿ.ಉಷಾರಾಣಿ ಇದ್ದರು.
ಸುಮಾರು 125 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ನಾಪೋಕ್ಲುವಿನ ಮುಖ್ಯ ರಸ್ತೆಗಳಲ್ಲಿ ಪಥಸಂಚಲನ ಸಾಗಿತು. ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ ಪಥಸಂಚಲನಕ್ಕೆ ಚಾಲನೆ ನೀಡಿದರು.
ಶಿಬಿರಾಗ್ನಿ: ಶನಿವಾರ ರಾತ್ರಿ ನಡೆದ ಭವ್ಯ ಶಿಬಿರಾಗ್ನಿಯಲ್ಲಿ ವಿದ್ಯಾರ್ಥಿಗಳ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಭಾನುವಾರ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನೆರವೇರಿತು. ನಂತರ ಸೌದೆ ಒಲೆಯಲ್ಲಿ ಮಕ್ಕಳು ಸಿದ್ಧಪಡಿಸಿದ ವಿವಿಧ ಭೋಜನ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡಿತು. ನಂತರ ಮಕ್ಕಳು ವಿವಿಧ ಆಟೋಟ ಮತ್ತು ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿದರು.
ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಕೆ.ಎ.ಹ್ಯಾರಿಸ್ ವಹಿಸಿದ್ದರು. ನಾಯಕ ರಂಜಿತ್ ಶಿಬಿರದ ವರದಿ ಮಂಡಿಸಿದರು. ಸಹ ನಾಯಕ ಕುಮಾರಸ್ವಾಮಿ ಮತ್ತು ಗೈಡ್ಸ್ ಕ್ಯಾಪ್ಟನ್ ಜಾಜಿ, ಶಿವಣ್ಣ, ಶಿಕ್ಷಕರಾದ ಸರಿತಾ, ಅಮಿತ, ಸೀತಮ್ಮ, ಸೋನಿಯಾ, ಚಂದ್ರಕಲಾ, ಗೀತಾ, ಖಜಾಂಚಿ ಗಂಗಮ್ಮ ಇತರರಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದ ಬಳಿಕ ಧ್ವಜಾವರೋಹಣದೊಂದಿಗೆ ಶಿಬಿರ ಸಂಪನ್ನಗೊಂಡಿತು.