ಲಕ್ಷ ಕೆರೆ ಗೋಮಾಳ ಗುಳುಂ

7 ckm 4a
Published on

ಚಿಕ್ಕಮಗಳೂರು: ಜಾನುವಾರುಗಳ ಮೇವಿಗೆ ಪೂರ್ವಿಕರು ಮೀಸಲಿಟ್ಟ ಗೋಮಾಳ ಒತ್ತುವರಿ ಹಾಗೂ ವಿವಿಧ ಉದ್ದೇಶಕ್ಕೆ ಹಂಚಿಕೆಯಾಗುತ್ತಿದ್ದು, ಹಲವು ಗ್ರಾಮಗಳಲ್ಲಿ ಗೋಮಾಳಗಳೇ ಕಣ್ಮರೆಯಾಗಿವೆ. ಸರ್ಕಾರಿ ಜಾಗ ಹಾಗೂ ಗೋಮಾಳ ಜಾಗದಲ್ಲಿ ನಮೂನೆ 50, 53 , 57, 94ಸಿ ಗಳಲ್ಲಿ ಜಿಲ್ಲೆಯಲ್ಲಿ 1.03 ಲಕ್ಷ ಎಕರೆ ಪ್ರದೇಶ ಒತ್ತುವರಿಯಾಗಿದೆ. 861.36 ಎಕರೆ ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿವೆ.

ಒಂದೆಡೆ ಜಾನುವಾರುಗಳ ಸಂಖ್ಯೆ ಏರಿದೆಯಾದರೆ ಮತ್ತೊಂದೆಡೆ ಗೋಮಾಳ ಸೇರಿ ಸರ್ಕಾರಿ ಜಾಗಗಳು ಬಹಳಷ್ಟು ಒತ್ತುವರಿಯಾಗುತ್ತಿವೆ. ಗೋಮಾಳ ಜಾಗ ಸರ್ಕಾರಿ ದಾಖಲೆಯಲ್ಲಿ ಭದ್ರವಾಗಿದ್ದರೂ ವಾಸ್ತವವಾಗಿ ಬಹುತೇಕ ಒತ್ತುವರಿಯಾಗಿರುವುದರಿಂದ ಕೆಲವೊಂದು ಗ್ರಾಮಗಳಲ್ಲಿ ಗೋಮಾಳಗಳೇ ಇಲ್ಲ.

ಗೋವು, ಕುರಿ, ಮೇಕೆ ಸೇರಿ ನೂರು ಜಾನುವಾರುಗಳಿಗೆ 12 ಹೆಕ್ಟೇರ್ ಪ್ರದೇಶ ಮೀಸಲಿಟ್ಟು ಉಳಿದ ಜಾಗವನ್ನು ಹಂಚಿಕೆ ಮಾಡಬಹುದು ಎಂದು ನಿಯಮ 97ನಲ್ಲಿ 1966ರಲ್ಲೆ ನಿಬಂಧನೆ ಮಾಡಲಾಗಿದೆ. ಗೋಮಾಳ ಜಾಗ ನಗರಸಭೆ, ಪುರಸಭೆಗೊಳಪಟ್ಟಿದ್ದರೆ 5 ಕಿಮಿ ವ್ಯಾಪ್ತಿಯ ಸ್ಥಳಗಳನ್ನು ನಿವೇಶನ ರಹಿತರ ವಸತಿಗೆ , ಪರಿಶಿಷ್ಟರಿಗೆ ಕೃಷಿಯಾಧಾರಿ ಬಳಕೆಗೆ ಹಾಗೂ ರುದ್ರಭೂಮಿಗೆ ಅವಕಾಶ ಕಲ್ಪಿಸಿ 2007ರಲ್ಲಿ ಅಧಿಸೂಚನೆ ಹೊರಡಿಸಿದ್ದು ಆ ಸ್ಥಳವನ್ನು ಹಂಚಿಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ.

ಈ ಅವಕಾಶ ಬಳಕೆ ಮಾಡಿಕೊಂಡು ಗೋಮಾಳ ಜಾಗದಲ್ಲಿ ಸಮುದಾನ ಭವನ ಮತ್ತು ರುದ್ರಭೂಮಿಗೆ ಜಾಗ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಉದ್ದೇಶಕ್ಕೆ ಗೋಮಾಳ ಹಂಚಿಕೆ ಮಾಡಲು ಜಿಲ್ಲಾಧಿಕಾರಿ ಮೇಲೆ ರಾಜಕೀಯ ಒತ್ತಡ ಕೂಡ ಹೆಚ್ಚುತ್ತಿದೆ. ನಿವೇಶನಕ್ಕೆ ಜಾಗ ಕೊರತೆ ಇರುವ ಕಡೆ ಗೋಮಾಳಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಹಿಂದೆ ಕಂದಾಯ ಇಲಾಖೆಯಿಂದಲೇ ಜಾನುವಾರುಗಳ ಮಾಹಿತಿ ಕಲೆಹಾಕಲಾಗುತ್ತಿತ್ತು. ಈಗ ಅದಕ್ಕೆ ಪ್ರತ್ಯೇಕ ಇಲಾಖೆ ಇರುವುದರಿಂದ ಗೋಮಾಳ ಪ್ರದೇಶ ವಿಲೇವಾರಿ ಮಾಡಬೇಕಾದ ಸಂದರ್ಭ ಬಂದಾಗ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಜಾನುವಾರುಗಳ ಗಣತಿ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡುತ್ತಾರೆ.

ಈ ವರದಿ ಆಧರಿಸಿ ಜಾನುವಾರುಗಳ ಸಂಖ್ಯೆ ಆಧರಿಸಿ ಗೋಮಾಳ ನಿಗದಿಪಡಿಸಲಿದ್ದು, ಹೆಚ್ಚುವರಿ ಗೋಮಾಳವನ್ನು ಹಂಚಿಕೆ ಮಾಡಲು ಆದೇಶ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ತೀರ್ವನ: 1960 ರ ಆಸುಪಾಸಿನಲ್ಲಿ ಗೋಮಾಳ ಪರಿಕಲ್ಪನೆ ಆರಂಭವಾಗಿದ್ದು, ಗ್ರಾಮದಲ್ಲಿ ಜಾನುವಾರುಗಳಿಗೆ ಮೇಯಲು ಮೀಸಲಿಟ್ಟ ಜಾಗವೆ ಗೋಮಾಳ. 1964ರಲ್ಲಿ ಭೂ ಕಂದಾಯ ಕಾಯ್ದೆ ಜಾರಿಯಾಗಿದ್ದು ಜಾಗವನ್ನು ಕಾಯ್ದಿರಿಸುವುದು ಅಥವಾ ಹಂಚಿಕೆ ಮಾಡುವ ಸಂಪೂರ್ಣ ಹಕ್ಕು ಜಿಲ್ಲಾಧಿಕಾರಿಗೆ ಸೇರಿದೆ.

ಗೋಮಾಳ ಆವರಿಸಿಕೊಂಡ ಅರಣ್ಯ ಇಲಾಖೆ: ಜಿಲ್ಲೆಯಲ್ಲಿ ಗೋಮಾಳ ಜಾಗಗಳನ್ನೊಳಗೊಂಡಂತೆ ಬಹಳಷ್ಟು ಸರ್ಕಾರಿ ಭೂಮಿಯನ್ನು ಅರಣ್ಯ ಇಲಾಖೆ ಡೀಮ್್ಡ ಫಾರೆಸ್ಟ್ ಎಂದು ಅಧಿಸೂಚನೆ ಹೊರಡಿಸಿದೆ. ಆ ಜಾಗದಲ್ಲಿ ಜಾನುವಾರುಗಳಿಗೆ ಮೇಯಲು ಅವಕಾಶವಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆಯಾದರೂ ಘೊಷಿತ ಡೀಮ್್ಡ ಫಾರೆಸ್ಟ್​ನಲ್ಲಿ ಅಕೇಶಿಯಾ, ನೀಲಗಿರಿ ಮರ ಬೆಳೆಸಿರುವುದರಿಂದ ಹುಲ್ಲು ಕೂಡ ಬೆಳೆಯುತ್ತಿಲ್ಲ.

ಬೀದಿಗೆ ಬಂದ ದನಗಳು: ನಗರ ಸುತ್ತಮುತ್ತ ಗ್ರಾಮಗಳ ಜಾನುವಾರುಗಳು ಮೇಯಲು ಕರಡಿಹಳ್ಳಿ ಕಾವಲು, ಚುರ್ಚೆಗುಡ್ಡ ಇತ್ಯಾದಿ ಕಡೆ ಹೋಗುತ್ತಿದ್ದವು. ಈಗ ಒಂದಿಷ್ಟು ಒತ್ತುವರಿ ಮತ್ತೊಂದಿಷ್ಟು ಅರಣ್ಯ ಇಲಾಖೆಗೆ ಸೇರಿದ ಕಾರಣ ಗೋವುಗಳು ಪೇಟೆಗೆ ಬರುವಂತಾಗಿದೆ. ಬೀದಿಗೆ ಬರುವ ದನಗಳು ನಿವೇಶನಗಳಲ್ಲಿ ಬಿದ್ದ ತ್ಯಾಜ್ಯ, ಪ್ಲಾಸ್ಟಿಕ್ ತಿನ್ನುತ್ತಿವೆ.

10 ವರ್ಷದ ಹಿಂದೆ 25ಕ್ಕೂ ಹೆಚ್ಚು ಜಾನುವಾರುಗಳಿದ್ದವು. ಹಾಲು, ಗೊಬ್ಬರ ಮಾರಾಟ ಮಾಡಿ ಜೀವನ ಮಾಡುತ್ತಿದ್ದೆವು. ಈಗಿರುವ 10 ದನಗಳಿಗೆ ಮೇವಿಲ್ಲದಂತಾಗಿ ಕೆರೆಕಟ್ಟೆಗಳ ಬಳಿ ಸಿಕ್ಕಿದ್ದನ್ನು ಮೇಯಿಸುವ ಪರಿಸ್ಥಿತಿಯಿದೆ. ಗೋಮಾಳ ಒಂದಿಷ್ಟು ಒತ್ತುವರಿಯಾಗಿ ಉಳಿದಿದ್ದರಲ್ಲಿ ಅರಣ್ಯ ಇಲಾಖೆ ನೀಲಗಿರಿ, ಅಕೇಶಿಯಾ ಬೆಳೆಸಿದೆ. ಸರ್ಕಾರ ಎಚ್ಚೆತ್ತುಕೊಂಡು ಗೋಮಾಳ ಉಳಿಸದಿದ್ದರೆ ಗೋವುಗಳ ಸಾಕಣೆೆ ಬಿಡಬೇಕಾಗುತ್ತದೆ ಎಂಬುದು ಸಗನೀಪುರದ ರೈತ ಮಹಿಳೆ ರಂಗಮ್ಮ ಅವರ ಅಳಲು.

ಹಳ್ಳಿಗಳಲ್ಲಿ ಗೋಮಾಳ ಒತ್ತುವರಿಯಾಗಿ ಮೇಯಿಸಲು ಜಾಗವಿಲ್ಲದೆ ಹಸಿವು ನೀಗಿಸಿಕೊಳ್ಳಲು ಜಾನುವಾರುಗಳು ತೋಟ, ಹೊಲ-ಗದ್ದೆಗಳಿಗೆ ತೆರಳುವುದರಿಂದ ಪರಸ್ಪರ ಜಗಳ, ದೊಂಬಿಗಳಾಗಿದ್ದು, ಇದರಿಂದ ಬೇಸತ್ತು ಗೋ ಸಾಕಣೆೆಯನ್ನೇ ಬಿಟ್ಟಿರುವ ನೂರಾರು ಉದಾಹರಣೆಗಳು ಜಿಲ್ಲೆಯಲ್ಲಿವೆ ಎನ್ನುತ್ತಾರೆ ನಿವೃತ್ತ ಉಪ ತಹಸೀಲ್ದಾರ್ ಕೆ.ಎಸ್.ರಾಘವೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net