ರೇಷ್ಮೆ ಗೂಡು ಬೆಲೆ ಕನಿಷ್ಠ, ಚಾಕಿ ದರ ತಟಸ್ಥ

silk 1
Published on

ರಾಮನಗರ: ಕರೊನಾ ಹೊಡೆತಕ್ಕೆ ಸಿಲುಕಿ ಕೃಷಿ ಕ್ಷೇತ್ರ ನಲುಗುತ್ತಿದೆ. ಬಹುತೇಕ ಬೆಳೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಿದ್ದಾನೆ. ರೇಷ್ಮೆ ಬೆಳೆಯೂ ಇದರಿಂದ ಹೊರತಾಗಿಲ್ಲ.

ಕರೊನಾ ಸೋಂಕು ವ್ಯಾಪಿಸುವ ಮುನ್ನ ಕೆ.ಜಿ.ಗೆ ಸುಮಾರು 700 ರೂ. ಗಡಿ ದಾಟಿದ್ದ ರೇಷ್ಮೆಗೂಡಿನ ಬೆಲೆ ಈಗ 150 ರೂ. ಆಸುಪಾಸಿಗೆ ಬಂದಿದೆ. ಆದರೆ, ರೈತರಿಗೆ ಪೂರೈಕೆ ಮಾಡುವ ಚಾಕಿ ಬೆಲೆ ಮಾತ್ರ ಇಂತಹ ಸಂದರ್ಭದಲ್ಲೂ ಇಳಿಕೆ ಆಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇಳಿಯದ ಬೆಲೆ: ಕರೊನಾ ಹಿನ್ನೆಲೆಯಲ್ಲಿ ರೇಷ್ಮೆ ಬೆಲೆ ಪಾತಾಳಕ್ಕೆ ಇಳಿದಿದೆ. ಸರಿಯಾದ ಮಾರುಕಟ್ಟೆ ಸೌಲಭ್ಯ ಇಲ್ಲದ ಕಾರಣ ಸೋಂಕು ಹರಡುವ ಭೀತಿಯಿಂದ ಅಧಿಕಾರಿಗಳು ಅರೆ ಮನಸ್ಸಿನಿಂದಲೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಆದರೆ, ಮಾರುಕಟ್ಟೆ ಸಮಸ್ಯೆ ಇದ್ದರೂ ರೈತರು ರೇಷ್ಮೆ ಬೆಳೆಯುವುದನ್ನು ನಿಲ್ಲಿಸಿಲ್ಲ, ಆದರೆ ಬೆಲೆ ಕುಸಿತದಂತಹ ಸಂಕಷ್ಟದ ಸನ್ನಿವೇಶದಲ್ಲಿ ಚಾಕಿ ಬೆಲೆ ಕಡಿಮೆ ಆಗಬಹುದು ಎನ್ನುವ ಆಸೆ ರೈತರಲ್ಲಿ ಮೂಡಿತ್ತು. ಆದರೆ ಮಿಶ್ರ ತಳಿ 100 ಮೊಟ್ಟೆಯ ಚಾಕಿಗೆ 3400 - 3500 ರೂ.ವರೆಗೂ ಮಾರಾಟವಾಗುತ್ತಿದ್ದು, ದ್ವಿತಳಿ 100 ಮೊಟ್ಟೆ ಬೆಲೆ 4000 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಬಿತ್ತನೆಗೂಡು ಬೆಲೆ ಜಾಸ್ತಿ: ಮತ್ತೊಂದೆಡೆ ಸಂಕಷ್ಟದ ಸಮಯದಲ್ಲೂ ಚಾಕಿ ಬೆಲೆ ಕಡಿಮೆ ಅಗದೆ ಇರಲು ಬಿತ್ತನೆ ಗೂಡಿನ ಬೆಲೆಯಲ್ಲಿ ಹೆಚ್ಚಳವಾಗಿರುವುದೇ ಕಾರಣ ಎನ್ನುವ ಮಾತು ಚಾಕಿ ಸಾಕಣೆದಾರರ ಅಭಿಪ್ರಾಯ. ಪ್ರಸ್ತುತ ಮಿಶ್ರ ತಳಿ ಬಿತ್ತನೆಗೂಡಿನ ಬೆಲೆ ಕೆ.ಜಿ.ಗೆ 700 ರೂ.ವರೆಗೂ ಇದ್ದರೆ, ದ್ವಿತಳಿ ಗೂಡಿನ ಬೆಲೆ 800ರೂ ಇದೆ. ಅಲ್ಲದೆ, ಕೆಲವು ಚಾಕಿ ಸಾಕಣೆದಾರರು ನೇರವಾಗಿ ಬಿತ್ತನೆಗೂಡು ಖರೀದಿ ಮಾಡದೆ ಮೊಟ್ಟೆಯನ್ನು ಖರೀದಿ ಮಾಡಿ, ನಂತರ ಚಾಕಿ ಸಾಕಣೆ ಮಾಡಿ ರೈತರಿಗೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಕಿ ಉತ್ಪಾದನಾ ವೆಚ್ಚ ಹೆಚ್ಚಿರುವ ಕಾರಣ ರೈತರಿಗೆ ಹೆಚ್ಚಿನ ದರದಲ್ಲಿಯೇ ಮಾರಾಟ ಮಾಡಬೇಕಿದೆ ಎನ್ನುತ್ತಾರೆ ಚಾಕಿ ಸಾಕಣೆದಾರರು.

ಸರ್ಕಾರ ನೆರವಿಗೆ ಬರಬೇಕಿದೆ: ಚಾಕಿ ಸಾಕಣೆದಾರರು ಬೆಲೆ ಹೆಚ್ಚಳ ಮಾಡಿದರೆ ಮತ್ತು ರೀಲರ್‌ಗಳು ಗೂಡಿನ ಬೆಲೆ ಕಡಿಮೆ ಮಾಡಿದರೆ ಇದರ ನೇರ ಹೊಡೆತ ಬೀಳುವುದು ರೈತರ ಮೇಲೆ. ಬೆಲೆ ಕುಸಿತದಂತಹ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚಿನ ಮೊತ್ತ ಪಾವತಿಸಿಯೇ ರೈತರು ಚಾಕಿಯನ್ನು ಖರೀದಿ ಮಾಡಬೇಕಿರುವುದರಿಂದ, ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶ ಮಾಡಿ ಚಾಕಿ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎನ್ನುವುದು ರೈತರ ಆಗ್ರಹ. ಇಲ್ಲವಾದರೆ ಕರೊನಾ ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು ಮತ್ತಷ್ಟು ನಷ್ಟಕ್ಕೆ ಒಳಗಾಗುವುದು ಖಂಡಿತ.

ಚಾಕಿ ಸಾಕಣೆ ಕೇಂದ್ರಗಳು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅದರೆ ಪ್ರಸ್ತುತ ಸನ್ನಿವೇಶದಲ್ಲಿ ಚಾಕಿ ದರವನ್ನು ಕಡಿಮೆ ಮಾಡುವ ಸಂಬಂಧ ಸೂಕ್ತ ನಿರ್ದೇಶಕ ನೀಡುವಂತೆ ಇಲಾಖೆ ಆಯುಕ್ತರಿಗೆ ಮನವಿ ಮಾಡಲಾಗುವುದು. ಎಸ್.ವಿ. ಕುಮಾರ್ ಜಂಟಿ ನಿರ್ದೇಶಕರು, ರೇಷ್ಮೆ ಕೃಷಿ ಇಲಾಖೆ ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿದ್ದೇವೆ. ಕರೊನಾ ಪರಿಸ್ಥಿತಿಯಲ್ಲಿ ರೇಷ್ಮೆ ಉತ್ಪಾದನೆ ನಿಲ್ಲಿಸಿದರೆ ಹಿಪ್ಪು ನೇರಳೆ ತೋಟ ಪಾಳು ಬೀಳುತ್ತದೆ. ಅನಿವಾರ್ಯವಾಗಿ ರೇಷ್ಮೆ ಬೆಳೆಯಲೇಬೇಕು. ಆದರೆ ಚಾಕಿ ಬೆಲೆ ಮಾತ್ರ ಕಡಿಮೆ ಆಗಲೇ ಇಲ್ಲ. ಈ ಬಗ್ಗೆ ಇಲಾಖೆ ಮತ್ತು ಸರ್ಕಾರ ಗಮನ ಹರಿಸಬೇಕಿದೆ. ಕೆ.ರವಿ ರೇಷ್ಮೆ ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net