ಗುಣಮಟ್ಟದ ರೇಷ್ಮೆ ಬೆಳೆಯಿರಿ

CPTN 2
workshop
Published on

*ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್ ಮಾಹಿತಿ

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಯಲಿಯೂರಿನಲ್ಲಿ ರೇಷ್ಮೆಕೃಷಿ ತಾಂತ್ರಿಕ ಸೇವಾ ಕೇಂದ್ರದಿಂದ ಇತ್ತೀಚೆಗೆ ರೇಷ್ಮೆ ಬೆಳೆಗಾರರಿಗಾಗಿ ವಿಶೇಷ ಕಾರ್ಯಾಗಾರ, ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಗುಣಮಟ್ಟದ ರೇಷ್ಮೆ ಬೆಳೆಯಲು ರೈತರು ಮುಂದಾಗಬೇಕಿದ್ದು, ರೇಷ್ಮೆ ಹೆಚ್ಚಿನ ಇಳುವರಿ ಪಡೆಯಲು ತಾಂತ್ರಿಕಾ ಸೇವಾ ಕೇಂದ್ರದ ವಿಸ್ತರಣಾಧಿಕಾರಿಗಳಿಂದ ಮಾಹಿತಿ ಪಡೆಯಬಹುದು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್ ತಿಳಿಸಿದರು.
ಯಲಿಯೂರು ತಾಂತ್ರಿಕ ಸೇವಾ ಕೇಂದ್ರದಿಂದ ರೇಷ್ಮೆ ಬೆಳೆಗಾರರಿಗೆ ಹಿಪ್ಪು ನೇರಳೆ ತೋಟ ನಿರ್ವಹಣೆ, ರೇಷ್ಮೆ ಹುಳುಗಳಿಗೆ ತಗಲುವ ಸೋಂಕುಗಳಿಗೆ ಯಾವರೀತಿ ಕ್ರಮ ಕೈಗೊಳ್ಳಬೇಕು, ಸೊಪ್ಪು ಬೆಳೆಯಲು ಯಾವ ರೀತಿಯ ಸಾವಯವ ಗೊಬ್ಬರವನ್ನು ಬಳಸಬೇಕು. ಅತಿಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಏರ್ಪಡಿಸಿ, ವಿಚಾರ-ವಿನಿಮಯ ಮಾಡಿ, ಉಪಯುಕ್ತ ಮಾಹಿತಿ ನೀಡಿದ್ದೇವೆ ಎಂದರು.
ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆಕೃಷಿ ವಿಸ್ತರಣಾಧಿಕಾರಿಗಳಾದ ಎಲ್.ಪಿ.ಧನಂಜಯ ದೇವನಹಳ್ಳಿ, ಕಮಲಮ್ಮ ವಿಜಯಪುರ, ಕೆ.ಟಿ.ಪ್ರಭಾಕರ್ ಯಲಿಯೂರು, ಎಂ.ರಾಮು, ಟಿಎಸ್‌ಸಿ ದೇವನಹಳ್ಳಿ, ಜೈಶಂಕರ್, ಸೋಮಶೇಖರ್ ಯಲಿಯೂರು, ಲೋಕೇಶ್ ವಿಜಯಪುರ ಹಾಗೂ ರೇಷ್ಮೆ ಕೃಷಿಕ ರೈತರು ಯಶಸ್ವಿಗೊಳಿಸಿದರು.

ಸಂವಾದದಲ್ಲಿ ಏನೆಲ್ಲ ಸಲಹೆ ನೀಡಿದರು? ಕೋಲಾರ ತಾಲೂಕು ಚಿಟ್ಟನಹಳ್ಳಿ ಸಾವಯವ ಕೃಷಿಯ ಪ್ರಗತಿಪರ ರೈತ ನಾಗರಾಜು 3 ಗಂಟೆಗಳ ಕಾಲ ರೇಷ್ಮೆ ಕೃಷಿಕರಿಗೆ ಉಪಯುಕ್ತ ಮಾಹಿತಿ ನೀಡಿದರು. ಮೊದಲು ಹುಳು ಸಾಕಾಣಿಕಾ ಕೊಠಡಿಯನ್ನು ಪರ‌್ಮೋಲಿನ್, ಬ್ಲೀಚಿಂಗ್ ಮಾಡಿ, ಕ್ರಿಮಿಗಳಿಲ್ಲದ ಹಾಗೆ ಸಿದ್ಧಪಡಿಸಿಕೊಳ್ಳಬೇಕು, ನಂತರ ಹುಳುಗಳಿಗೆ ಯಾವುದೇ ಸೋಂಕು ತಗಲದಂತೆ ಎಚ್ಚರವಹಿಸಬೇಕು, ಹುಳುಗಳಿಗೆ ಸುಣ್ಣವನ್ನು ಸಕಾಲದಲ್ಲಿ ಸಿಂಪಡಿಸಿದರೆ ಸೋಂಕು ತಗಲದಂತೆ ಕಾಪಾಡಬಹುದು, ನಂತರ ಹುಳುವಿಗೆ ಹಾಕಿರುವ ಸೊಪ್ಪು ತಿಂದ ನಂತರ ಅದನ್ನು ಬದಲಾಯಿಸಬೇಕು, ಅಂತಹ ಕಸವನ್ನು ಉಪಯೋಗಿಸಿ ಮತ್ತೆ ನಾವು ಗೊಬ್ಬರ ಯಾವರೀತಿ ತಯಾರಿಸಿಕೊಳ್ಳಬಹುದು, ಎರೆಹುಳುವಿನ ಗೊಬ್ಬರ ತಯಾರಿಸಿಕೊಳ್ಳುವ ರೀತಿ, ಸಾವಯವ ಗೊಬ್ಬರ, ರಾಸಯನಿಕ ಸೇರಿ ಅನೇಕ ವಿವರಣೆಯನ್ನು ರೈತರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡಿದರು. ತಾವೇ ತಯಾರಿಸಿದ ಸಾವಯವ ಗೊಬ್ಬರ, ರಾಸಾಯನಿಕಗಳನ್ನು ರೈತರಿಗೆ ತೋರಿಸಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net