

ಹುಬ್ಬಳ್ಳಿ; ಶತಮಾನಗಳ ಹಿಂದಿನ ಕಾಲ್ಪನಿಕ ಕಥೆಯನ್ನು ಆರಿಸಿಕೊಂಡು ಕಾದಂಬರಿಗೆ ಬಳಸಿಕೊಂಡಿದ್ದೇನೆ. ಇತಿಹಾಸದ ಇಟ್ಟಿಗೆಗಳನ್ನು ಉಪಯೋಗಿಸಿಕೊಂಡು ಆಧುನಿಕ ಕಟ್ಟಡ ಕಟ್ಟುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಇದು ಕಥೆಯಾಗಿ ಓದುಗರಿಗೆ ರುಚಿಸಿದರೆ ನನಗಷ್ಟೇ ಸಾಕು ಎಂದು ಕನ್ನಡದ ಜನಪ್ರಿಯ ಕಾದಂಬರಿಕಾರ ವಸುಧೇಂದ್ರ ಅವರು ಹೇಳಿದರು.
ಹೊಸ ತಲೆಮಾರಿನ ಹೊಸಬಗೆಯ ಕತೆಗಾರರೂ, ಪ್ರಬಂಧಕಾರರೂ ಆಗಿರುವ ವಸುಧೇಂದ್ರ
ಅವರ ಹೊಸ ಕಾದಂಬರಿ "ರೇಷ್ಮೆ ಬಟ್ಟೆ' ಇತ್ತೀಚೆಗೆ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿಯ ಕೊಪ್ಪಿಕರ ರಸ್ತೆ ಸಾಹಿತ್ಯ ಭಂಡಾರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸಕ್ಕೆ ಯಾವುದೇ ನಿಖರತೆ ಎಂಬುದು ಸಿಗುವುದಿಲ್ಲ. ಆದರೆ, ಇತಿಹಾಸದ ತಪ್ಪುಗಳನ್ನು ಗಮನಿಸಿ ನಮ್ಮ ಜೀವನದಲ್ಲಿ ಅಂತಹ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬಹುದು. ಅಂತಹ ಜಾಗೃತಿಯನ್ನು ಇತಿಹಾಸ ಮಾಡುತ್ತದೆ. ಸೋತವನು ಕಲಿಯುವ ಪಾಠವೇ ಬಹಳ ದೊಡ್ಡದು ಎಂಬುದು ಸತ್ಯ ಎಂದರು.
ಧಾರವಾಡ ಜಿಲ್ಲೆಯು ಸಾಹಿತಿಗಳ ನಾಡು, ಪ್ರಕಾಶಕರ ಬೀಡು, ಇಂತಹ ಜಾಗದಲ್ಲಿ ನನ್ನ ಕಾದಂಬರಿಯ ಬಗ್ಗೆ ಮಾತನಾಡುವುದು, ಓದುಗರೊಂದಿಗೆ ಬೆರೆಯುವುದು ಎಂದರೆ ನನಗೆ ಎಲ್ಲಿಲ್ಲದ ಸಂಭ್ರಮ ತಂದಿದೆ ಎಂದು ಹೇಳಿದರು.
ನಾಲ್ಕು ವರ್ಷ ಬೇಕಾಯಿತು:
'ರೇಷ್ಮೆ ಬಟ್ಟೆ' ಬರೆಯಬೇಕಾದರೆ ನಾಲ್ಕು ವರ್ಷ ತೆಗೆದುಕೊಂಡಿದ್ದೇನೆ. ಇಂಜಿನಿಯರಿಂಗ್ ನಾಲ್ಕು ವರ್ಷ ಓದಿರುವ ನನಗೆ ಅಲ್ಲಿ ಪಠ್ಯಕ್ರಮ ಇರುತ್ತಿತ್ತು. ಆದರೆ, ಇಲ್ಲಿ ಅದು ಇರುವುದಿಲ್ಲ. ಸಾಹಿತ್ಯದ ವಿಸ್ತಾರ ದೊಡ್ಡದು. ಕಥೆಯ ಮೂಲಕ ಇತಿಹಾಸ ಹೇಳಿದರೆ ರುಚಿಸುತ್ತದೆ ಎಂಬ ಕಾರಣಕ್ಕೆ ನಾಲ್ಕು ವರ್ಷ ಎಲ್ಲವನ್ನೂ ನಾನು ಓದುತ್ತ ಹೋದೆ. ಬಹಳಷ್ಟು ಅಧ್ಯಯನ ಮಾಡಿದ ನಂತರ ಕೃತಿ ರಚಿಸಿದ್ದರಿಂದ ಓದುಗರಿಗೆ ಹಿಡಿಸಬಹುದು ಎಂದರು.
ಕಾಲ್ಪನಿಕ ಕಥೆ ಬರೆಯಲು ಮುಖ್ಯವಾಗಿ ಧೈರ್ಯ ಬೇಕು. ನನ್ನದಲ್ಲದ ಜಗತ್ತನ್ನು ಸೃಷ್ಟಿಸುವುದು ಅಥವಾ ಚಿತ್ರಿಸುವುದು ಸವಾಲಿನ ಕೆಲಸ. ಅದನ್ನು ನಾನು ಈ ಕೃತಿಯಲ್ಲಿ ಮಾಡಿದ್ದೇನೆ. ವಿದ್ಯಾಥಿರ್ಗಳು ಹಾಗೂ ಯುವಕರಲ್ಲಿ ಇಂತಹ ಪುಸ್ತಕಗಳ ಮೂಲಕ ಇತಿಹಾಸದ ಬಗ್ಗೆ ಪ್ರೀತಿ ಹುಟ್ಟಿಸಬಹುದು ಎಂದರು.
ಓದುಗರು ಕೇಳಿದ ಹಲವು ಪ್ರಶ್ನೆಗಳಿಗೆ ವಸುಧೇಂದ್ರ ಅವರು ಉತ್ತರಿಸುತ್ತ, ತಾವು ನಾಲ್ಕು ವರ್ಷಗಳ ಕಾಲ ಓದಿದ ಹಲವು ಸಂಗತಿಗಳನ್ನು, ಇತಿಹಾಸ ಪುಟಗಳಿಂದ ತಾವು ಕಂಡುಕೊಂಡ ಸಂಗತಿಗಳನ್ನು ಹಂಚಿಕೊಂಡರು. ಮನೋರಂಜನೆ ಜತೆಗೆ ಇತಿಹಾಸ ತಿಳಿಯುವ ಅವಕಾಶ ಇಲ್ಲಿದೆ. ಇದು ನನ್ನ ಆಶಯ ಕೂಡ ಆಗಿತ್ತು ಎಂದರು.
ಚೀನಿಯರು ಹೆಚ್ಚು ಸಂಶೋಧನಾ ಪ್ರವೃತ್ತಿ ಉಳ್ಳವರು, ಸಕ್ಕರೆ, ಕಾಗದ, ರೇಷ್ಮೆ ಹೀಗೆ ಹಲವು ಸಂಗತಿಗಳನ್ನು ಮೊದಲು ಕಂಡುಕೊಂಡವರು ಅವರು. ಬೌದ್ಧ ಧರ್ಮ, ಜೈನ್ ಧರ್ಮಗಳು ಸೇರಿ ಹಲವು ಸಂಗತಿಗಳು ರಸ್ತೆಗಳ ಅವಿಷ್ಕಾರದಿಂದ ಜಗತ್ತಿಗೆ ಹೇಗೆ ಪಸರಿಸಿದವು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.
ಸಾಹಿತ್ಯ ಭಂಡಾರದ ಎಂ.ಎ. ಸುಬ್ರಹ್ಮಣ್ಯ, ಓದುಗರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.