

ವಿಜಯವಾಣಿ ಸುದ್ದಿಜಾಲ ಕುಣಿಗಲ್
ತಾಲೂಕಿನ ಮಾಕೋರ್ನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅ.18ರಿಂದ ರಾಗಿ ಬೆಳೆ ಬೆಳೆಯಲು ಹಾಗೂ ಸಾಲು ಕೆರೆಗೆಳನ್ನು ಮಾಕೋರ್ನಹಳ್ಳಿ ಜಲಾಶಯದಿಂದ ತುಂಬಿಸಲು ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿಮಾರ್ನಿಸಲಾಯಿತು. ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಮಾಕೋರ್ನಹಳ್ಳಿ ಜಲಾಶಯವು 2.4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗ 1400 ಎಂಸಿಎಫ್ಟಿ ನೀರು ಲಭ್ಯ ಇದೆ. ಬಾಕಿ 1248 ಎಂಸಿಎಫ್ಟಿ ನೀರು ಜಲಾಶಯಕ್ಕೆ ತುಂಬಿಸಬೇಕಿದೆ. ಪ್ರತಿದಿನ 15 ಎಂಸಿಎಫ್ಟಿ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಡಿಸೆಂಬರ್ವರೆಗೂ ನೀರು ಹರಿದರೆ ಜಲಾಶಯ ಭರ್ತಿಯಾಗಲಿದೆ ಎಂದು ತಿಳಿಸಿದರು.
ಸಹಾಯಕ ಇಂಜಿಯರ್ಗಳಾದ ಶ್ರೀನಿವಾಸ್, ವೀಣಾ, ಗೋವಿಂದೇಗೌಡ, ಅಮೃತೂರು ವಿಎಸ್ಎಸ್ಎನ್ ಅಧ್ಯಕ್ಷ ಹರೀಶ್, ಜಿಪಂ ಮಾಜಿ ಸದಸ್ಯ ಬೆನವಾರ ಶೇಷಣ್ಣ, ರೈತ ಮುಖಂಡರಾದ ನಂಜೇಗೌಡ, ರಾಜಣ್ಣ, ಅನಂತರಾಮು ಮತ್ತಿತರರು ಇದ್ದರು.
ಕಾಳ ಸಂತೆಯಲ್ಲಿ ಮೇವು ಮಾರಾಟ: ಕಾಳ ಸಂತೆಯಲ್ಲಿ ಖಾಸಗಿ ಮಾರಾಟಗಾರು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ರೈತರು ಆಗ್ರಹಿಸಿದರು. ಕೂಡಲೇ ಮಾರಾಟ ಮಳಿಗೆಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳಾ ಲಿಂಕ್ ಕೆನಾಲ್ ಶೀಘ್ರ: ಮಾಕೋನಹಳ್ಳಿ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುವ ನೀರನ್ನು ಮಂಗಳಾ ಜಲಾಶಯಕ್ಕೆ ಹರಿಸುವ ಲಿಂಕ್ ಕೆನಾಲ್ ಯೋಜನೆ ಪ್ರಗತಿಯಲ್ಲಿದ್ದು, ಈಗಾಗಲೇ ಭೂಸ್ವಾದಿನ ಪ್ರಕಿಯೆ ಮುಗಿದಿದೆ. ಇನ್ನು 60 ದಿನಗಳಲ್ಲಿ ಮಾಕೋನಹಳ್ಳಿ ಜಲಾಶಯದಿಂದ ಮಂಗಳಾ ಜಲಾಶಯಕ್ಕೆ ನೀರು ಹರಿಸಲಾಗುವುದೆಂದು ಶಾಸಕರು ತಿಳಿಸಿದರು.
ಗುಣಮಟ್ಟದ ಬಿತ್ತನೆ ರಾಗಿಗೆ ಆಗ್ರಹ
ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ನೀಡುವ ಬಿತ್ತನೆ ರಾಗಿ ಕಳಪೆಯಾಗಿದೆ ಎಂದು ಶಾಸಕರ ಗಮನಕ್ಕೆ ರೈತರು ತಂದಾಗ, ಗುಣಮಟ್ಟದ ಬಿತ್ತನೆ ರಾಗಿ ವಿತರಿಸುವಂತೆ ಶಾಸಕ ರಂಗನಾಥ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತರು ಅರ್ಥ ಮಾಡಿಕೊಳ್ಳಬೇಕು. ನೀವು ಬೆಳೆದು ಸರ್ಕಾರಕ್ಕೆ ಮಾರಾಟ ಮಾಡಿರುವ ರಾಗಿಯನ್ನೇ ಈಗ ನಿಮಗೆ ಬಿತ್ತನೆಗೆ ನೀಡುತ್ತಿದೆ. ನಿಮ್ಮದೇ ರಾಗಿ ಈಗ ಬಿತ್ತನೆ ರಾಗಿಯಾಗಿದೆ ಎಂದು ಹೇಳಿದಾಗ ಸಭೆಯು ನಗೆಗಡಲಲ್ಲಿ ತೇಲಿತು.
ರಾಗಿ ಬೆಳೆ ಸೂಕ್ತ
ಸದ್ಯ ಲಭ್ಯವಿರುವ ನೀರಿನ ಅಧಾರದ ಮೇಲೆ 90 ದಿನಗಳಲ್ಲಿ ಬರುವ ರಾಗಿ ತಳಿ ಬೆಳೆಯಲು ಸಮಸ್ಯೆ ಇಲ್ಲ. ಇದರೊಂದಿಗೆ ಸಾಲು ಕೆರೆ ತುಂಬಿಸಿಕೊಳ್ಳಬಹುದು ಎಂದು ಕೃಷಿ ಹಾಗೂ ಹೇಮಾವತಿ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ರೈತರ ಸಲಹೆ ಪಡೆದು ಅಂತಿಮವಾಗಿ ಅ.18ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ತೀಮಾರ್ನಿಸಲಾಯಿತು.