

ಹಾವೇರಿ: ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಾಗಾರಗಳು ಹಾಗೂ ನೀರಿನ ಟ್ಯಾಂಕ್ಗಳ ಸ್ವಚ್ಛತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಹಾವೇರಿ ನಗರಸಭೆ ಕಚೇರಿಗೆ ಗುರುವಾರ ಸಂಜೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದ ಜಲಾಗಾರ ಸ್ವಚ್ಛತೆ ಕೈಗೊಳ್ಳಬೇಕು. ಮುನ್ಸಿಪಲ್ ಮೈದಾನದಲ್ಲಿರುವ ಮೇಲ್ಮಟ್ಟದ ಟ್ಯಾಂಕ್ಗಳ ಆವರಣ ಮತ್ತು ಟ್ಯಾಂಕ್ ಸ್ವಚ್ಛಗೊಳಿಸಬೇಕು. ಶಿಥಿಲಗೊಂಡಿರುವ ಹಳೇ ಟ್ಯಾಂಕ್ಗಳ ಬಳಕೆ ಬಂದ್ ಮಾಡಬೇಕು. ವಾರದೊಳಗೆ ನಗರದ ಎಲ್ಲ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ಎಂದು ತಾಕೀತು ಮಾಡಿದರು.
‘ಜಲಾಗಾರ ಜನಾರೋಗ್ಯಕ್ಕೆ ಸಂಚಕಾರ’ ಶೀರ್ಷಿಕೆಯಡಿ ‘ವಿಜಯವಾಣಿ’ ರಿಯಾಲಿಟಿ ಚೆಕ್ ಮಾಡಿ ಆ. 24ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಮುಂದಡಿ ಇಟ್ಟಿದೆ.
ಹಾವೇರಿ: ಹಾವೇರಿ ನಗರಸಭೆಗೆ ನೀರು ಸರಬರಾಜು ಮಾಡುವ ಜಲಶುದ್ಧೀಕರಣ ಘಟಕ ಮತ್ತು ಜಲ ಸಂಗ್ರಹಾಲಯಗಳನ್ನು ಸ್ವಚ್ಛಗೊಳಿಸುವ ಕಾಮಗಾರಿ ನಿರ್ವಹಿಸಲು ದರಪಟ್ಟಿ (ಕೊಟೇಶನ್) ಕರೆಯಲಾಗಿದೆ. ಆಸಕ್ತ ಗುತ್ತಿಗೆದಾರರು ತಮ್ಮ ದರವಾರುಗಳನ್ನು ಸೀಲ್ ಬಂದ್ವಾಡಿ ಮೊಹರು ಲಕೋಟೆಗಳೊಂದಿಗೆ ಸೆ. 2ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ, ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂರ್ಪಸುವಂತೆ ನಗರಸಭೆ ಪ್ರಕಟಣೆ ಹೊರಡಿಸಿದೆ.
‘ರಿಯಾಲಿಟಿ ಚೆಕ್’ ಮೂಲಕ ಜಲಾಗಾರ ಮತ್ತು ನೀರಿನ ಟ್ಯಾಂಕ್ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಕ್ಕೆ ‘ವಿಜಯವಾಣಿ’ ತಂಡಕ್ಕೆ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಎಇಇ ನಾಗರಾಜ ರಾಯ್ಕರ ಧನ್ಯವಾದ ತಿಳಿಸಿದ್ದಾರೆ. ಹಾವೇರಿ ಮುನ್ಸಿಪಲ್ ಮೈದಾನದ ನೀರಿನ ಟ್ಯಾಂಕ್ಗಳ ಆವರಣದಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಶಿಥಿಲಗೊಂಡಿರುವ ಟ್ಯಾಂಕ್ ಬಳಸದಿರಲು ಹಾಗೂ ಶೀಘ್ರವೇ ಅದನ್ನು ನೆಲಸಮ ಮಾಡಲು ನಿರ್ಧರಿಸಲಾಗಿದೆ. ಪಕ್ಕದ ಹೊಸ ಟ್ಯಾಂಕ್ ಕೆಳಗೆ ಕೊಳಚೆ ನೀರು ನಿಲ್ಲದಂತೆ ಪೇವರ್ಸ್ ಅಳವಡಿಸಲಾಗುವುದು. ಟ್ಯಾಂಕ್ ಸುತ್ತ ತಂತಿ ಬೇಲಿ ನಿರ್ವಿುಸಿ ಯಾರೂ ಸುಳಿಯದಂತೆ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜಲಾಗಾರಗಳು, ಓವರ್ಹೆಡ್ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ಒಡೆದ ಪೈಪ್ಲೈನ್ಗಳನ್ನು ದುರಸ್ತಿಗೊಳಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತ್ವರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆದೇಶಿಸಿದ್ದೇನೆ. | ರಘುನಂದನ ಮೂರ್ತಿ, ಜಿಲ್ಲಾಧಿಕಾರಿ