

ದೇವದುರ್ಗ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕೊಯ್ನ ಜಲಾಶಯದಿಂದ ಕೃಷ್ಣಾನದಿಗೆ ಅಪಾರ ಪ್ರಮಾಣ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಸುರಕ್ಷತೆ ದೃಷ್ಟಿಯಿಂದ ಡ್ಯಾಂನಿಂದ ಶನಿವಾರ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರು ಹೊಳೆಗೆ ಹರಿಸಲಾಗಿದೆ.
ಎರಡ್ಮೂರು ದಿನಗಳಿಂದ ಸುಮಾರು 68ಸಾವಿರ ಕ್ಯೂಸೆಕ್ ನೀರು ಕೃಷ್ಣಾನದಿಗೆ ಹರಿಸಲಾಗುತ್ತಿತ್ತು. ನಾರಾಯಣಪುರ ಜಲಾಶಯದಲ್ಲಿ ಒಳಹರಿವು 65ಸಾವಿರ ಕ್ಯೂಸೆಕ್ ಹೆಚ್ಚಳವಾಗಿದ್ದರಿಂದ ಶನಿವಾರ ಮಧ್ಯಾಹ್ನ 3ಗಂಟೆಗೆ ಹೊರಹೊರಿವು ಹೆಚ್ಚಳ ಮಾಡಲಾಗಿದೆ. ಮಧ್ಯಾಹ್ನ 99,225 ಕ್ಯೂಸೆಕ್ ನೀರು 22ಕ್ರಸ್ಟ್‌ಗೇಟ್‌ಗಳ ಮೂಲಕ ಹೊರಕ್ಕೆ ಹಾಕಲಾಗಿದ್ದು ಜಲಾಶಯದಲ್ಲಿ 29.70 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಇನ್ನು ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಮುಂಜಾಗ್ರತೆ ಕ್ರಮವಾಗಿ ಬಂದ ನೀರನ್ನು ಯಥಾವತ್ತಾಗಿ ನದಿಗೆ ಹರಿಸಲಾಗುತ್ತಿದೆ. 123.08 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 97.41 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಒಳಹರಿವು 65,480 ಕ್ಯೂಸೆಕ್ ಇದ್ದು ಕೃಷ್ಣಾನದಿಗೆ 65,480 (ಯಥಾವತ್ತ) ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ರಾತ್ರಿವೇಳೆಗೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ.
ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಭಾನುವಾರ ಸಂಜೆವೇಳೆಗೆ ತಾಲೂಕಿಗೆ ತಲುಪುವ ಸಾಧ್ಯತೆಯಿದೆ. ನದಿದಂಡೆ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಹೂವಿನಹೆಡಗಿಯ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದ್ದು ಗೋಪುರ ಮಾತ್ರ ತೇಲಿದೆ. 1ಲಕ್ಷ ಕ್ಯೂಸೆಕ್ ನೀರುಬಂದರೆ ಬಹುತೇಕ ಜಲಾವೃತವಾಗಲಿದೆ.
ವೀರಗೋಟದ ಶ್ರೀಮೌನಲಿಂಗೇಶ್ವರ ದೇವಸ್ಥಾನ ಮೆಟ್ಟಿಲಿಗೆ ನೀರು ಬರಲಿದ್ದು ರಸ್ತೆ ಸಂಪರ್ಕ ಕಡಿತವಾಗಲಿದೆ. ಅಂಜಳದ ಬಸವೇಶ್ವರ ದೇವಸ್ಥಾನ, ಕೊಪ್ಪರದ ಶ್ರೀಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀಆಂಜಿನೇಯ ದೇವಸ್ಥಾನ ಸಮೀಪ ನೀರುಬಂದಿವೆ. ಅರಸಿಣಿಗಿ ಶ್ರೀಅಣೆಮಲ್ಲೇಶ್ವರ ದೇವಾಲಯ ಹಾಗೂ ಗೂಗಲ್ ಅಲ್ಲಪ್ರಭು ದೇವಸ್ಥಾನ ಮೆಟ್ಟಿಲುಗಳು ಮುಳುಗಡೆಯಾಗಿವೆ.
ಅಧಿಕಾರಿಗಳ ತಂಡ ನದಿ ದಂಡೆಗೆ ಭೇಟಿನೀಡಿ ಪರಿಸ್ಥಿತಿ ಅವಲೋಕ ಮಾಡುತ್ತಿದೆ. ಎರಡೂವರೆ ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಂದರೆ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಲಿದ್ದು ಯಾದಗಿರಿ ರಾಯಚೂರು ರಸ್ತೆ ಸಂಪರ್ಕ ಕಡಿತವಾಗಲಿದೆ.
ನದಿದಂಡೆ ಗ್ರಾಮಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಿದ್ದು ಅಧಿಕಾರಿಗಳ ತಂಡ ಕೃಷ್ಣಾನದಿಯಲ್ಲಿ ಬಿಡಾರ ಹೂಡಲಿದೆ. ನಾನು ಹಲವುಕಡೆ ಭೇಟಿನೀಡಿ ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಹೂವಿನಹೆಡಗಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಉಳಿದಕಡೆ ಯಾವುದೇ ಸಮಸ್ಯೆ ಇಲ್ಲ. 2.5ಲಕ್ಷಕ್ಕಿಂತ ಹೆಚ್ಚುನೀರು ಬಂದರೆ ರೈತರಿಗೆ ಸಮಸ್ಯೆಯಾಗಲಿದೆ.| ಚನ್ನಮಲ್ಲಪ್ಪ ಘಂಟಿ, ತಹಸೀಲ್ದಾರ್, ದೇವದುರ್ಗ
ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣ ಮಳೆಯಾಗಿದ್ದು ಕೃಷ್ಣಾನದಿಗೆ ಹೆಚ್ಚುನೀರು ಬರುತ್ತಿವೆ. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಬಂದನೀರು ಯಥಾವತ್ತು ನದಿಗೆ ಹರಿಸಲಾಗುತ್ತಿದೆ. ನದಿದಂಡೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ರೈತರ ಅನುಕೂಲಕ್ಕಾಗಿ ನಾರಾಯಣಪುರ ಬಲ, ಎಡದಂಡೆ ನಾಲೆಗೂ ನೀರು ಹರಿಸಲಾಗಿದೆ.|ಪ್ರೇಮ್‌ಸಿಂಗ್, ಸಿಇ, ಕೆಬಿಜೆಎನ್‌ಎಲ್ ಭೀಮರಾಯನಗುಡಿ ವಿಭಾಗ.