ಅವಳಿನಗರ ಅಭಿವೃದ್ಧಿಗೆ ಸಮಯ ಮೀಸಲು

web 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೇಯರ್ ಆಗಿದ್ದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದೇನೆ. ನಂತರದ ದಿನಗಳಲ್ಲಿ ಸಹ ಸಾರ್ವಜನಿಕರ ಸಂಪರ್ಕ, ನಾಗರಿಕ ಸೇವೆಗೆ ಸಮಯ ಮೀಸಲಿಟ್ಟು ಹು-ಧಾ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಮೇಯರ ಈರೇಶ ಅಂಚಟಗೇರಿ ಹೇಳಿದರು.
ನಗರದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಅನೇಕ ಸಮಸ್ಯೆಗಳ ಮಧ್ಯೆಯೂ ಸಿಕ್ಕ ಅವಕಾಶದಲ್ಲಿ ಮಹಾನಗರ ಪಾಲಿಕೆಗೆ ಆದಾಯ ಸಂಗ್ರಹ, ವಿಶೇಷ ಯೋಜನೆಗಳ ಜಾರಿ ಹಾಗೂ ಮಹತ್ವದ ನಿರ್ಣಯಗಳಿಂದ ರಾಜ್ಯದಲ್ಲೇ ಹು-ಧಾ ಅವಳಿ ನಗರ ಎತ್ತರದ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ್ದೇನೆ ಎಂಬ ನಂಬಿಕೆ ಇದೆ ಎಂದರು.
ಮೊದಲ ಸಾಮಾನ್ಯ ಸಭೆಯಲ್ಲಿ ಪ್ರತಿ ವಾರ್ಡಗಳ ಅಭಿವೃದ್ಧಿಗೆ 50 ಲಕ್ಷ ರೂ. ಸೇರಿ ಪ್ರತಿ ಸದ್ಯರಿಗೆ ಒಟ್ಟಾರೆ 1 ಕೋಟಿ ರೂ. ಅನುದಾನ ಸಿಗುವಂತೆ ಮಾಡಿದ್ದೇನೆ. ಸ್ವಚ್ಛ ನಗರ ಅಭಿಯಾನದಡಿ ದೇಶದಲ್ಲಿ 92ನೇ ಸ್ಥಾನ ಹಾಗೂ ರಾಜ್ಯದಲ್ಲಿ 2ನೇ ಸ್ಥಾನ ಪಡೆಯಲು ಪಾಲಿಕೆ ಯಶಸ್ವಿಯಾಯಿತು ಎಂದರು.
2.30 ಕೋಟಿ ರೂ. ವೆಚ್ಚದಲ್ಲಿ ಕಡಪಾ ಮೈದಾನದ ಅಭಿವೃದ್ಧಿಗೆ ಚಾಲನೆ, ಪಾಲಿಕೆಯಿಂದ ಹೊರಗುಳಿದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಆದೇಶ ಮಾಡಿದ್ದಲ್ಲದೆ, ಪ್ರಥಮ ಬಾರಿಗೆ 1138.54 ಕೋಟಿ ರೂ. ದಾಖಲೆ ಬಜೆಟ್ ಮಂಡಿಸಲಾಗಿದೆ. ಒಟ್ಟಾರೆ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮೇಯರ್ ಅವಧಿ ಮುಗಿದರೂ ಜನರ ಸೇವೆ ನಿರಂತರವಾಗಿರಲಿದೆ ಎಂದರು.
ಅತಿಕ್ರಮಣ ತೆರವಿಗೆ ಸೂಚನೆ: ಮಳೆಗಾಲದಲ್ಲಿ ಮುಖ್ಯ ಕಾಲುವೆ ಹಾಗೂ ತಗ್ಗು-ಗುಂಡಿಗಳಿಂದ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಈಗಾಗಲೇ ತಗ್ಗು-ಗುಂಡಿ ಮುಚ್ಚುವ ಕಾರ್ಯ ನಡೆದಿದೆ. ನಾಲಾ ಒತ್ತುವರಿ, ಅಡ್ಡಲಾಗಿರುವ ಕೇಬಲ್ ತೆರವಿಗೆ ಸೂಚನೆ ನೀಡಲಾಗಿದೆ. ಮುಂದಿನ 3 ತಿಂಗಳ ಕಾಲ ಯಾವುದೇ ದೊಡ್ಡ ಗುಂಡಿಗಳನ್ನು ತೆಗೆಯಲು ಪರವಾನಗಿ ನೀಡದಂತೆ ಸೂಚಿಸಲಾಗಿದೆ. ಮಳೆ ನೀರು ನುಗ್ಗಿದಾಗ ಶೀಘ್ರ ಕಾರ್ಯಾಚರಣೆಗಾಗಿ ಹು-ಧಾದಲ್ಲಿ ತಲಾ ಒಂದು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಅಂಚಟಗೇರಿ ತಿಳಿಸಿದರು.
ತನಿಖೆಗೆ ಸಿದ್ಧ: ನನ್ನ ಅವಧಿಯಲ್ಲಿ ಭ್ರಷ್ಟಾಚಾರ ತಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು, ಮೇಯರ್ ಕಚೇರಿ ಹಾಗೂ ಸಿಬ್ಬಂದಿಯಿಂದ ಭ್ರಷ್ಟಾಚಾರ ನಡೆದಿದೆ ಎಂಬ ಮಾತು ಕೇಳಿ ಬಂದಿಲ್ಲ. ಒಂದು ವೇಳೆ ಅಂತಹ ತಪ್ಪುಗಳು ನಡೆದಿದ್ದರೆ, ಯಾವುದೇ ತನಿಖೆಗೂ ಸಿದ್ಧ ಎಂದು ಈರೇಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net