ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ನೀಡಿ, ಕೂಡಲಸಂಗಮ ಸ್ವಾಮೀಜಿ ಆಗ್ರಹ

Panchamasali shree
Published on

ಹಾನಗಲ್ಲ: ರೈತರ ಬೆವರಿನ ಅನ್ನಕ್ಕೆ ಬೆಲೆ ಕೊಡದ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಸಹಿಸಲು ಸಾಧ್ಯವಿಲ್ಲ. ಲಿಂಗವಂತ ಸಮುದಾಯಕ್ಕೆ ಕೇಂದ್ರದ ಒಬಿಸಿ, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ದೊರೆಯುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮದು ಕೃಷಿಕ ಸಮಾಜ. ರೈತರ ಸಮಸ್ಯೆಗಳನ್ನೇ ಆಲಿಸದ ಸರ್ಕಾರಗಳ ನೀತಿ ಖಂಡನೀಯ. ಸಂವಿಧಾನ ಬದ್ಧವಾಗಿ ರೈತನಿಗೆ ನ್ಯಾಯ ದೊರೆಯಬೇಕು. ಸ್ವಾಭಿಮಾನದಿಂದ ದುಡಿದು ದೇಶಕ್ಕೆ ಅನ್ನ ನೀಡುವ ಪಂಚಮಸಾಲಿ ಸಮುದಾಯದ ಹಿತ ರಕ್ಷಣೆಗೆ ಕೇಂದ್ರ-ರಾಜ್ಯ ಸರ್ಕಾರಗಳು ನಿಲ್ಲಲೇಬೇಕು ಎಂದು ಒತ್ತಾಯಿಸಿದರು.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ನಮ್ಮ ಹೋರಾಟ ಆರಂಭಿಸಿದ್ದೇವೆ. ನಾವು ಮತ ನೀಡಿ, ತೆರಿಗೆ ಕಟ್ಟಿ ನಿಮಗೆ ಅಧಿಕಾರ ನೀಡಿದ್ದಾವೆ. ನಮಗೆ ಸೌಲಭ್ಯ ಕೊಡಲು ಮೀನಮೇಷ ಮಾಡುತ್ತಿದ್ದೀರಿ. ಹಿಂದಿನ ಸರ್ಕಾರ 2ಡಿ ಮೀಸಲಾತಿ ಆಸೆ ಹಚ್ಚಿ ಮಾಯವಾಯಿತು. ನಾನು ಸಮಾಜಕ್ಕೆ ಮೋಸ ಮಾಡಲು ಸಿದ್ಧನಿಲ್ಲ. ಮೀಸಲಾತಿ ಸಿಗುವವರೆಗೆ ವಿರಮಿಸುವುದಿಲ್ಲ ಎಂದರು.

ನಿಪ್ಪಾಣಿಯಿಂದ ಹೋರಾಟ ಆರಂಭಿಸಿದ್ದು, ಸಾರ್ವಜನಿಕವಾಗಿ ಲಿಂಗಪೂಜೆ ಮೂಲಕ, ಅದರಲ್ಲೂ ಹೆದ್ದಾರಿಗಳಲ್ಲಿ ಲಿಂಗಪೂಜೆ ಮಾಡಿ ಜಾಗೃತಿ ಮೂಡಿಸುತ್ತೇನೆ. ಲೋಕಸಭೆ ಚುನಾವಣೆ ಮೊದಲು ನಮಗೆ ಮೀಸಲಾತಿ ಬೇಕು. ಇದು ನಮ್ಮ ಹಕ್ಕೊತ್ತಾಯ. ನಾವು ಕಿತ್ತೂರ ಚನ್ನಮ್ಮನ ವಂಶಜರು, ಯಾವುದೇ ಹೋರಾಟಕ್ಕೆ ಹೆದರುವುದಿಲ್ಲ ಎಂದು ಸ್ವಾಮೀಜಿ ನಿರ್ಧಾರ ಪ್ರಕಟಿಸಿದರು.

ಪಂಚಮಸಾಲಿ ಸಮಾಜದ ಜಿಲ್ಲಾ ಮಹಿಳಾ ಘಟಕದ ಗೀತಾ ಪೂಜಾರ ಮಾತನಾಡಿ, ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ನಡೆದ ಹೋರಾಟಕ್ಕೆ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸಬೇಕು. ನಾವು ಮತ ಹಾಕಿದ್ದೇವೆ. ಸರ್ಕಾರ ರಚಿಸಲು ನಮ್ಮ ಶಕ್ತಿಯಿದೆ. ನಮ್ಮ ಸಮಾಜದ ಬಗ್ಗೆ ನಿರ್ಲಕ್ಷ ಸಹಿಸುವುದಿಲ್ಲ. ನಮ್ಮ ಬೇಡಿಕೆ ಈಡೇರಲು ಸಾತ್ವಿಕ ಹೋರಾಟಕ್ಕೆ ಮುಂದಾಗಿದ್ದೇವೆ. ಕಿತ್ತೂರು ಚನ್ನಮ್ಮನ ನಾಡಿನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಲಸೂರ, ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಮಾರುತಿ ಶಿಡ್ಲಾಪುರ, ಈರಣ್ಣ ದೊಡ್ಡಮನಿ, ಜಗದೀಶ ಬೆಣ್ಣಿ, ಮಾಲತೇಶ ಮೂಡುರ, ಮಂಜು ದೊಡ್ಡಮನಿ, ಜಿ.ಕೆ. ಪಾಟೀಲ, ಬಸವರಾಜ ಬೈಲಣ್ಣನವರ, ನಂದೀಶ ಹಳ್ಳಿಗುಡಿ, ಪೂರ್ಣೆಶ ದೊಡ್ಡಮನಿ, ಮಣಿಕಂಠ ಪಾಟೀಲ, ಸಿದ್ದಲಿಂಗ ಪಾಟೀಲ, ಶಿವಾನಂದ ಪೂಜಾರ ಇತರರು ಉಪಸ್ಥಿತರಿದ್ದರು.

ಮೆರವಣಿಗೆ

ಪಂಚಮಸಾಲಿ ಜಗದ್ಗುರುಗಳು ಪ್ರಥಮ ಬಾರಿಗೆ ಸಾಂವಸಗಿ ಗ್ರಾಮಕ್ಕೆ ಆಗಮಿಸಿದ್ದರಿಂದ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾದಯತ್ರೆ, ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net