

ಅರಸೀಕೆರೆ ಗ್ರಾಮಾಂತರ: ಜಾತಿ ಜನಗಣತಿ ಖ್ಯಾತಿ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಬಾರದು ಎಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಮುಂದಾಗಿರುವುದು ವಿಪರ್ಯಾಸ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಕಸಬಾ ಹೋಬಳಿ ಜಾಜೂರು ಗ್ರಾಮದ ಭಗೀರಥ ಉಪ್ಪಾರ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಭಗೀರಥ ಉಪ್ಪಾರ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕೇಂದ್ರ ಸರ್ಕಾರರಕ್ಕೂ ಮುನ್ನವೇ ಜಾತಿ ಜನಗಣತಿಗೆ ಮುನ್ನುಡಿ ಬರೆದದ್ದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಆದರೂ ಕೇಂದ್ರ ಸರ್ಕಾರದ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಜಾತಿ ಜನಗಣತಿ ಸಮೀಕ್ಷೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಿಮ್ಮ ನಿರ್ದಿಷ್ಟವಾದ ಜಾತಿ ಹೆಸರನ್ನು ನಮೂದಿಸಬೇಕು. ಹಿಂದುಳಿದ ವರ್ಗಗಳು ಹಾಗೂ ತಳ ಸಮುದಾಯಗಳ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ಸಕಲ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರಲು ಮೀಸಲಾತಿ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸತತ ಪ್ರಯತ್ನದಿಂದ ಭಗೀರಥ ಮಹರ್ಷಿ ಭಗವಂತ ಶಿವನನ್ನು ಬೇಡಿ ಧರೆಗೆ ಗಂಗೆಯನ್ನು ಕರೆತಂದಂತೆ, ನನ್ನ ಭಗೀರಥ ಪ್ರಯತ್ನದ ಫಲವಾಗಿ ತಾಲೂಕಿಗೆ ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ನದಿ ನೀರನ್ನು ತಾಲೂಕಿಗೆ ತರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಮತ್ತು ಹೋರಾಟ ನಿಲ್ಲದು, ತಾಲೂಕಿಗೆ ಆದಷ್ಟು ಬೇಗ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಯಲಿದೆ ಎಂದರು.
ಇಂದಿನ ಯುವ ಪೀಳಿಗೆ ನಮ್ಮ ಪೂರ್ವಜರು ಹಾಗೂ ದಾರ್ಶನಿಕರ ಆದರ್ಶ ಮತ್ತು ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಹನೀಯರ ಜಯಂತಿ ಆಚರಣೆಯಿಂದ ಆಯಾಯ ಸಮುದಾಯಗಳಲ್ಲಿ ಒಗ್ಗಟ್ಟು ಮತ್ತು ಸಂಘಟನೆ, ಒಮ್ಮತ ಮೂಡಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಉಪ್ಪಾರ ಸಮುದಾಯದವರೂ ಸಾಗಬೇಕಿದೆ. ಸರ್ಕಾರದ ಸವಲತ್ತುಗಳನ್ನು ಪಡೆದು ಉಪ್ಪಾರ ಸಮುದಾಯ ಬಲಿಷ್ಠಗೊಳ್ಳಬೇಕು. ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.
ಶಿಕ್ಷಣ, ಹಿಂದುಳಿದ ಮತ್ತು ತಳ ಸಮುದಾಯಗಳ ಶ್ರೇಯಸ್ಸಿಗೆ ಇರುವ ಸಾತ್ವಿಕ ಮಾರ್ಗವಾಗಿದೆ. ಶಿಕ್ಷಣದಿಂದ ಉನ್ನತ ಹುದ್ದೆಗಳನ್ನು ಪಡೆದು ಸಬಲರಾಗಬೇಕು. ಭಗೀರಥ ಮಹರ್ಷಿಯ ಆದರ್ಶಗಳು ಮತ್ತು ಅವರ ಸತತ ಪ್ರಯತ್ನದ ಮನೋಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಭಗೀರಥ ಮಹರ್ಷಿ ಅವರ ಸತತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಭಗೀರಥ ಮಹರ್ಷಿಯೇ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಭಗೀರಥ ಮಹರ್ಷಿ ಕುರಿತು ನಿವೃತ್ತ ಉಪನ್ಯಾಸಕ ರಂಗಸ್ವಾಮಿ ಉಪನ್ಯಾಸ ನೀಡಿದರು. ತಾಲೂಕಿನ ಉಪ್ಪಾರ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಸರ್ಕಾರಿ ವಿವಿಧ ಹುದ್ದೆಗಳಲ್ಲಿರುವ ಮತ್ತು ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಯಿತು.
ತಾಲೂಕು ಭಗೀರಥ ಉಪ್ಪಾರ ಟ್ರಸ್ಟ್ ಅಧ್ಯಕ್ಷ ಕೆ. ಸಿ.ಡಿ.ಶಿವಕುಮಾರ್, ಕಾರ್ಯದರ್ಶಿ ಚನ್ನಬಸಪ್ಪ, ಖಜಾಂಚಿ ಗಂಗಾಧರ್ ಜಾಜೂರು, ಮಾಜಿ ಅಧ್ಯಕ್ಷ ಮೈಲಾರಪ್ಪ, ಭಾಗ್ಯಮ್ಮ, ತಾಲೂಕು ಪಂಚಾಯಿತಿ ಇಒ ಸತೀಶ್, ಶಾಸಕರ ಆಪ್ತ ಸಹಾಯಕ ಲಕ್ಷ್ಮೀಶ್ ಬಾಬು, ಸಹಾಯಕ ಕೃಷಿ ಅಧಿಕಾರಿ ಪ್ರಭಾವತಿ, ಸಿದ್ದೇಶ್ ಜಾಜೂರು, ಹೊನ್ನಪ್ಪ, ನಿರಂಜನ್, ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾಬಾಯಿ ಚಂದ್ರಶೇಖರ್ ನಾಯ್ಕ ಇತರರು ಇದ್ದರು.