ಮೀಸಲಾತಿ ಹೆಚ್ಚಳ ಶೀಘ್ರವೇ ನ್ಯಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

Valmiki Jayanti
Published on

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇದ್ದು, ಈ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ರ್ಚಚಿಸುತ್ತಿದ್ದು ಶೀಘ್ರವೇ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಹಿಂದುಳಿದವರಿಗೆ ಮೀಸಲಾತಿ ನೀಡುವುದರಿಂದ ಅವರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದರೆ ಮೀಸಲಾತಿ ನೀಡುವುದು ಸುಲಭದ ಕೆಲಸವಲ್ಲ. ಆದರೂ ನಾವು ಪೂರಕವಾದ ಪ್ರಯತ್ನ ನಡೆಸಿದ್ದೇವೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬುಧವಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಹಲವಾರು ಸಮುದಾಯಗಳು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಎಲ್ಲರ ಸಹಕಾರ ಮುಖ್ಯ ಎಂದರು. ಸಮುದಾಯ ಬೆಳೆದಂತೆ ಮೀಸಲಾತಿ ಬೇಡಿಕೆ ಹೆಚ್ಚಾಗುತ್ತದೆ, ಇದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಕಾಳಜಿ ವಹಿಸಿ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಶೇ.10 ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದಾರೆ ಎಂದ ಸಿಎಂ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಬೇಕೆಂಬ ಬೇಡಿಕೆಯನ್ನು ನಾನು ಮುಖ್ಯಮಂತ್ರಿಯಾದ ತಕ್ಷಣವೇ ಈಡೇರಿಸಲು ನಿರ್ಧರಿಸಿದೆ. ಜತೆಗೆ ಈ ಸಮುದಾಯದ ಅಭಿವೃದ್ಧಿಗೆ 7,200 ಕೋಟಿ ರೂ. ಅನುದಾನವನ್ನು ನೀಡಿದ್ದೇವೆ. ಇದು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಬೇಕೆಂಬ ನಮ್ಮ ಬೇಡಿಕೆ ಸಂವಿಧಾನಿಕವಾಗಿ ಸರಿ ಇದೆ. ಬಸವರಾಜ ಬೊಮ್ಮಾಯಿ ಅವರಿಂದ ಭರವಸೆ ಸಿಕ್ಕಿದೆ. ಆದಷ್ಟು ಬೇಗ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ, ನಂಬಿಕೆಯೂ ಇದೆ. ಸವಾಲು ಸಾಕಷ್ಟು ಇದೆ ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಸಿ. ಆಗ ನೈಜ ವಾಲ್ಮೀಕಿ ಜಯಂತಿಗೆ ಅರ್ಥ ಬರಲಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡದವರಷ್ಟೇ ಪಾಯಖಾನೆ ತೊಳೆಯಬೇಕೇ? ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸ ಬೇಕು. ಮೇಲ್ವರ್ಗದವರು ಇದನ್ನ ಕೆಲಸವೆಂದು ಅರಿಯಬೇಕು. ಹಾಗಾದಾಗ ಮಾತ್ರ ಶೋಷಣೆ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಕಲಾ ಮೆರುಗು

ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಸವರಾಜ ಬೊಮ್ಮಾಯಿ ಹಾಗೂ ಸ್ವಾಮೀಜಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಜಾನಪದ ಕಲಾತಂಡ, ವಿವಿಧ ವೇಷಭೂಣ ತೊಟ್ಟಿದ್ದ ಕಲಾವಿದರು ಕಾರ್ಯಕ್ರಮಕ್ಕೆ ಕಳೆಗಟ್ಟಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net