ಅನಾಥ ಮಕ್ಕಳಿಗೆ ಶೇ. 1 ಮೀಸಲಾತಿ ನೀಡಲು ಶಿಫಾರಸು

K.Jayaprakash-Hegde-held-meeting-in-karwar
Published on

ಕಾರವಾರ: ತಂದೆ, ತಾಯಿ ಯಾರೂ ಗೊತ್ತಿಲ್ಲದ ಅನಾಥ ಮಕ್ಕಳನ್ನು `ಮೋಸ್ಟ್ ಬ್ಯಾಕ್‌ವರ್ಡ್' ಎಂದು ಪರಿಗಣಿಸಿ ಶೇ.1 ರಷ್ಟು ಮೀಸಲಾತಿ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗಡೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಇದುವರೆಗೆ ನಾವು ಸರ್ಕಾರಕ್ಕೆ 34 ವರದಿಗಳನ್ನು ಸಲ್ಲಿಸಿದ್ದೇವೆ. ಅದರಲ್ಲಿ ಪ್ರಮುಖವಾಗಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡುವುದಾಗಿದೆ ಎಂದರು.

ನೇಮಕಾತಿ ಅಥವಾ ಶೈಕ್ಷಣಿಕ ವಿಷಯಗಳ ಭರ್ತಿಯ ಸಂದರ್ಭದಲ್ಲಿ ಅನಾಥ ಮಕ್ಕಳು ಇಲ್ಲದೇ ಇದ್ದಲ್ಲಿ ಅದರ ಮೀಸಲಾತಿಯನ್ನು ಬ್ಯಾಕ್‌ಲಾಗ್‌ ಎಂದು ಒಟ್ಟುಕೊಳ್ಳದೇ ಇತರರಿಗೆ ಕೊಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಕೋವಿಡ್ ಸಮಯದಲ್ಲಿ ಅಥವಾ ಬೇರೆ ಸಮಯದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥರಾದವರಿದ್ದಲ್ಲಿ ಅವರ ಜಾತಿ ಗೊತ್ತಿದ್ದಲ್ಲಿ ಆ ಜಾತಿಯ ಮೀಸಲಾತಿಯನ್ನು ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಆಯೋಗದ ಸದಸ್ಯರಾದ ಕಲ್ಯಾಣಕುಮಾರ್, ಶಾರದಾ ನಾಯ್ಕ, ರಾಜಶೇಖರ್, ಅರುಣಕುಮಾರ್, ಎಡಿಸಿ ರಾಜು ಮೊಗವೀರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸತೀಶ ಇದ್ದರು.

ಉಪ ಜಾತಿ ಸೇರಿಸಲು ಶಿಫಾರಸು

ವೀರಶೈವ, ಲಿಂಗಾಯತದ ಎಲ್ಲ ಉಪ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೆಲವು ಅಲೆಮಾರಿ ಸಮುದಾಯಗಳ ಹೆಸರನ್ನೂ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದರು.

ಎರಡೂ ಪಟ್ಟಿಯಲ್ಲಿ ಮೊಗೇರರು

ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮುದಾಯದ ಹೆಸರು ಎಸ್‌ಸಿ ಹಾಗೂ ಹಿಂದುಳಿದ ವರ್ಗದ ಪ್ರವರ್ಗ 1 ರ ಪಟ್ಟಿಯಲ್ಲೂ ಇದೆ. ಈ ಮೊದಲು ಸಮುದಾಯಕ್ಕೆ ಎಸ್‌ಸಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಈಗ ಅದನ್ನು ಸ್ಥಗಿತ ಮಾಡಲಾಗಿದೆ. ಇದರಿಂದ ಹಲವು ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದವರ ಹೇಳಿಕೆ ಪಡೆಯಲಾಗಿದೆ. ಅಽಕಾರಿಗಳಿಂದ ದಾಖಲೆ ಪಡೆದುಕೊಳ್ಳಲಾಗಿದೆ. ಈ ಕುರಿತು ಹೈಕೋರ್ಟ್ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಸಹ ಆದೇಶ ನೀಡಿದೆ. ಸರ್ಕಾರದ ಅಡ್ವೋಕೇಟ್ ಜನರಲ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಎಲ್ಲವನ್ನೂ ಪರಿಗಣಿಸಿ ಸರ್ಕಾರಕ್ಕೆ ಒಂದು ವರದಿ ಸಲ್ಲಿಸಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net