

ತುಮಕೂರು: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲು ಇರುವಂತೆ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಸಹಕಾರ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕು ಮೀಸಲು ತರುವ ಮಸೂದೆ ರೂಪಿಸಿದ್ದು ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಾಡಲು ಬದ್ಧರಾಗಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಖಾಸಗಿ ರೆಸಾರ್ಟ್ಸಲ್ಲಿ ಕೆ.ಎನ್.ರಾಜಣ್ಣರ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಹೊರತರಲಾಗಿದ್ದು "ಸಹಕಾರ ಸಾರ್ವಭೌಮ' ಗೌರವ ಗ್ರಂಥಕ್ಕೆ ಬರಹಗಳನ್ನು ನೀಡಿದ ಲೇಖಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಶಕ್ತರಿಗೆ, ಅಸಹಾಯಕರಿಗೆ ಸಹಾಯ ಮಾಡುವಂತಹ ಶಕ್ತಿ ಹಾಗೂ ಹೆಚ್ಚಿನ ಅವಕಾಶ ಸಹಕಾರಿಗಳಿಗೆ ಇರುತ್ತದೆ. ಈ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಜನಪ್ರಿಯತೆ, ಜನಬೆಂಬಲವೂ ದೊರೆಯುತ್ತದೆ. ಸಹಕಾರಿಗಳಿಗೆ ಜಾತಿ, ಪಕ್ಷದ ಬೇಧ ಇರುವುದಿಲ್ಲ. ಸಹಕಾರಿಗಳು ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ನಾವು ಜನನಾಯಕರಾಗುವುದಕ್ಕಿಂಥಾ ಜನವೊಂದಿಗರಾಗಬೇಕು. ಜನರಿಗೆ ಒಮ್ಮೆ ನಮ್ಮ ಮೇಲೆ ನಂಬಿಕೆ ಬಂದರೆ ಸಾಕು, ಕೊನೆವರೆಗೂ ಜತೆಗಿರುತ್ತಾರೆ. ಸಹಾಯ ಅಗತ್ಯವಿರುವವರಿಗೆ ಸಹಾಯ ಮಾಡುತ್ತಾ ಜನರೊಂದಿಗೆ ಬೆರೆತು ಬಾಳುವುದು ಸಹಕಾರಿ ಮನೋಭಾವದ ರಾಜಕಾರಣವಾಗಬೇಕು. ಜೀವಮಾನದ ಕಡೆವರೆಗೂ ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಾನು ಯಾವುದೇ ಯಾತ್ರೆ ಮಾಡುವುದಿಲ್ಲ. ಬಡವರ ಕಷ್ಟಕ್ಕೆ ಸ್ಪಂದಿಸಿದಾಗ ಅವರು ನಮಗೆ ಒಳ್ಳೆಯದನ್ನು ಮಾಡೆಂದು ದೇವರನ್ನು ಕೇಳಿಕೊಳ್ಳುತ್ತಾರಲ್ಲಾ ಅದೇ ನನಗೆ ದೇವರ ಆಶೀರ್ವಾದ ಎಂದರು.
ನಾನು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಎರಡು ಬಾರಿ ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಿತ್ತು. ರಾಜಕಾರಣದಲ್ಲಿ ಯಾರನ್ನಾದರೂ ಬೆಳೆಯಲು ಬಿಡುತ್ತಾರೆ ಎಂಬುದು ಅನುಮಾನ. ಆದರೆ, ನನಗೆ ಬುದ್ಧಿ ಕಲಿಸಲು, ನನ್ನಲ್ಲಿ ಗಟ್ಟಿತನ ಹೆಚ್ಚಿಸಿಕೊಳ್ಳಲು ಇಂತಹ ಘಟನೆಗಳು ಸಹಕಾರಿಯಾಗುತ್ತವೆ. ಈ ಅನುಭವದ ಆಧಾರದ ಮೇಲೆಯೇ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾವಗಡ ಶಾಸಕ ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಗ್ರಂಥದ ಸಂಪಾದನಾ ಸಮಿತಿ ಅಧ್ಯಕ್ಷ ಎಸ್.ನಾಗಣ್ಣ, ಸಂಪಾದಕ ಮುರಳಿಕೃಷ್ಣಪ್ಪ, ಮುಖಂಡರಾದ ಆಡಿಟರ್ ಆಂಜನಪ್ಪ, ಡಾ.ಲಕ್ಷ್ಮಣದಾಸ್, ಹನುಮಂತರಾಯಪ್ಪ, ಡಾ.ಬಾಲಗುರುಮೂರ್ತಿ, ಮೌಲಾನ ರಶೀದ್, ಮಿಡಿಗೇಶಿ ಮಲ್ಲಿಕಾರ್ಜುನಯ್ಯ, ಎನ್.ಗಂಗಣ್ಣ, ಟಿ.ಎನ್.ನರಸಿಂಹಮೂರ್ತಿ, ಟಿ.ಪಿ,ಮಂಜುನಾಥ್, ಕುಂದೂರು ತಿಮ್ಮಯ್ಯ, ಕಲ್ಲಹಳ್ಳಿ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.