ಮಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ ಶೇ. 17) ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ ಗೆ ಶೇ. 7) ದವರಿಗೆ ಇದ್ದ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಬೇಕಾದರೆ ಕೇಂದ್ರ ಸರ್ಕಾರವು ಮೊದಲು ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆಗೊಳಿಸಬೇಕು ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಸ್ತುತ ಎಸ್.ಸಿ ಶೇ. 15, ಎಸ್.ಟಿ ಶೇ. 3 ಮೀಸಲಾತಿ ನೀಡಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿನ ಕೋಟ್ಯಂತರ ಮಂದಿಗೆ ಶಿಕ್ಷಣ, ಉದ್ಯೋಗದಲ್ಲಿ ಅನ್ಯಾಯವಾಗಿದೆ. 72 ಸಾವಿರ ಹುದ್ದೆಯಲ್ಲಿ ಸಾವಿರಾರು ಹುದ್ದೆಗಳು ಕೈತಪ್ಪಿ ಹೋಗಿದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಲುವಾಗಿ 2022ರಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವಿದ್ದಾಗ ರಚಿಸಲಾದ ಈ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ 2022ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು. 2023ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. 2025ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೂ ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರ ಇದುವರೆಗೂ ಏನೂ ಕ್ರಮ ಜರುಗಿಸಿಲ್ಲ. ಇಲ್ಲಿನ ಬಿಜೆಪಿ ಸಂಸದರಿಂದಲೂ ಏನೂ ಪ್ರಯೋಜನವಾಗಿಲ್ಲ ಎಂದರು.
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ
ಕಾಯ್ದೆಯ ವಿರುದ್ಧ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರ ಕೂಡ ಎಲ್ಲೋ ಎಡವಿದಂತೆ ಕಾಣುತ್ತಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಅನುಸೂಚಿ 9ಕ್ಕೆ ಸೇರ್ಪಡೆ ಬಗ್ಗೆ ಚರ್ಚಿಸಲಾಗುವುದು. 9ನೇ ಅನುಸೂಚಿಗೆ ಸೇರ್ಪಡೆಗೊಳಿಸಿದರೆ ಕೋರ್ಟ್ ತಡೆಯಂತಹ ಸಮಸ್ಯೆ ಉಂಟಾಗುವುದಿಲ್ಲ. ರಾಜ್ಯ ಸರ್ಕಾರ ಸರ್ವ ಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಕೊಂಡೊಯ್ದು ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ ಒತ್ತಡ ಹೇರಬೇಕು ಎಂದು ಉಗ್ರಪ್ಪ ಹೇಳಿದರು.
ರಾಮ ಮಂದಿರ ದೇಣಿಗೆ ದುರುಪಯೋಗ: ಸಿಬಿಐ ತನಿಖೆಗೆ ವಿ.ಎಸ್. ಉಗ್ರಪ್ಪ ಆಗ್ರಹ
ಮಂಗಳೂರು: ಶ್ರೀರಾಮಚಂದ್ರನ ಹೆಸರಿನಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ಲೂಟಿ ಹೊಡೆಯುತ್ತಿದೆ. ನೋಂದಣಿಯೇ ಆಗದ ಆರ್‌ಎಸ್‌ಎಸ್ ತನ್ನ ಆರಂಭದ ದಿನಗಳಿಂದ ಸಂಗ್ರಹಿಸಿರುವ ಗುರುದಕ್ಷಿಣೆಯೂ ಕಳ್ಳರ ಜೇಬಿಗಿಳಿದಿರುವ ಅನುಮಾನವಿದೆ. ಇವೆರಡೂ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಿಬಿಐ ತನಿಖೆಗೊಳಪಡಿಸಬೇಕು ಎಂದು ಮಾಜಿ ಸಂಸದ, ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ರಾಮ ಮಂದಿರ ದೇಣಿಗೆ ಅವ್ಯವಹಾರ ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಹಾಗೆಯೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದರು.
ರಾಮಜನ್ಮ ಭೂಮಿಯ ಹೆಸರಿನ ಟ್ರಸ್ಟ್‌ನವರು 1990ರಿಂದಲೇ ರಥಯಾತ್ರೆ, ಇಟ್ಟಿಗೆ ಯಾತ್ರೆಗಾಗಿ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ. ಆದರೆ ದೇಶಪ್ರೇಮಿಗಳು, ದೇಶ ಭಕ್ತರು ಎಂದು ಹೇಳಿಕೊಳ್ಳುವ ಇವರಿಗೆ ಶ್ರೀರಾಮಚಂದ್ರನ ಆಸ್ತಿಯನ್ನು ಹೊಡೆಯಬಾರದು ಎಂದು ಗೊತ್ತಿರಲಿಲ್ಲವೇ ಎಂದು ಉಗ್ರಪ್ಪ ಪ್ರಶ್ನಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಈಗಾಗಲೇ 29 ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದೇನೆ. ನಮ್ಮ ಬೇಡಿಕೆ ಈಡೇರಲು ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುತ್ತೇವೆ. ಎಸ್ಸಿ/ಎಸ್ಟಿ/ಒಬಿಸಿ ವರ್ಗಗಳಿಗೆ ಮೀಸಲಾತಿಯಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ.