

ಮಂಡ್ಯ : ಕಾವೇರಿ ವಿಚಾರದಲ್ಲಿ ಮೈಸೂರು ನಗರದ ಜನರು ಧನಿ ಎತ್ತಿ ಪ್ರತಿಭಟಿಸುತ್ತಿಲ್ಲ ಎಂದು ಆರೋಪಿಸಿ ಕಾವೇರಿ ನದಿಯಿಂದ ಮೈಸೂರು ನಗರಕ್ಕೆ ನೀರು ಪೂರೈಸುವ ಯಂತ್ರಗಾರವನ್ನು ಮೇಳಾಪುರ ಗ್ರಾಮಸ್ಥರು ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಮೈಸೂರು ನಗರಕ್ಕೆ 4ನೇ ಹಂತದ ನೀರು ಸರಬರಾಜು ಮಾಡುವ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿನ ಯಂತ್ರಗಾರದ ಎದುರು ಜಮಾವಣೆಗೊಂಡ ನೂರಾರು ಜನರು ಕೆಲಕಾಲ ಯಂತ್ರಗಾರದ ಕಾರ್ಯವನ್ನು ಸ್ತಬ್ದಗೊಳಿಸಿ ನೀರು ಪೂರೈಕೆಗೆ ತಡೆಯುಂಟು ಮಾಡಿ, ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮ ಮೈಸೂರು ವಿಭಾಗದ ಎಇಇ ನಾಗರಾಜು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಏಕಾಏಕಿ ಹೋರಾಟಕ್ಕೆ ಇಳಿಯದಂತೆ ಸಲಹೆ ನಿಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಕರೀಗೌಡ, ಎಂ.ಲೋಕೇಶ್, ಪ್ರವೀಣ್, ಗುರುಪ್ರಸಾದ್, ಅಶೋಕ್, ರಾಘವೇಂದ್ರ, ಜಯರಾಮು, ಮಹೇಶ್, ಎನ್.ಲೋಕೇಶ್, ಟಿ.ಶಂಕರ್, ನಿತಿನ್, ಕುಮಾರ್, ನವೀನ್ ಇತರರು ಇದ್ದರು.