

ಮಡಿಕೇರಿ: ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನ ನಡೆಯುತ್ತಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಭಾಷಿಕ ೧೮ ಮೂಲನಿವಾಸಿ ಸಮುದಾಯಗಳ ವಿರುದ್ಧ ತೀರಾ ಅಪ್ರಬುದ್ಧ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ಹಿಂಪಡೆಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಬದುಕನ್ನೇ ಮುಡುಪಾಗಿಟ್ಟುಕೊಂಡು ಮುನ್ನಡೆಯುತ್ತಿರುವ ೧೮ ಕೊಡವ ಭಾಷಿಕ ಮೂಲ ನಿವಾಸಿ ಜನಾಂಗದವರ ಬಗ್ಗೆ ತುಚ್ಚವಾಗಿ ಅಸವಿಂಧಾನಿಕ ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಫೆ.೧೯ರಂದು ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ನಡೆದ ಕೊಡವ ಭಾಷಿಕ ೧೮ ಮೂಲನಿವಾಸಿ ಸಮುದಾಯಗಳ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರು ೧೮ ಸಮುದಾಯ ಮೂಲ ನಿವಾಸಿಗಳ ಕುಲಶಾಸ್ತ್ರ ಅಧ್ಯಯನ ಮಾಡಿಸಲಾಗುವುದು. ಜನಾಂಗ ಬಾಂಧವರ ಹಿಂದಿನ ಕಾಲಘಟ್ಟದ ಐನ್‌ಮನೆ, ಮುಂದುಮನೆ, ಕೈಮಡ ನವೀಕರಣಕ್ಕೆ ರೂ. ೫ ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ಘೋಷಿಸಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಶಾಸಕರುಗಳು ಕೂಡ ಸಚಿವರ ಅಭಿಪ್ರಾಯಕ್ಕೆ ಪ್ರಶಂಶೆ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಆದರೆ ಇದೀಗ ಎನ್.ಯು.ನಾಚಪ್ಪ ಅವರು ಸಚಿವರ ಭರವಸೆಯನ್ನು ಸ್ವಾರ್ಥ ಚಿಂತನೆಯಿಂದ ಅವಲೋಕಿಸುತ್ತಿದ್ದಾರೆ. ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಪೋಷಿಸಿ ಉಳಿಸಿ ಬೆಳೆಸಿಕೊಂಡು ಮುನ್ನಡೆಯುತ್ತಿರುವ ೧೮ ಕೊಡವ ಭಾಷಿಕ ಮೂಲ ನಿವಾಸಿ ಸಮುದಾಯದ ಬಗ್ಗೆ ಒಂದು ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾಗಿ ಇಷ್ಟೊಂದು ಸಣ್ಣತನದ ಹೇಳಿಕೆ ನೀಡಿದ್ದಾರೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷ ತಂದೊಡ್ಡುವ ಕೆಲಸ ಇದಾಗಿದೆ ಎಂದು ಆರೋಪಿಸಿದ್ದಾರೆ.
ಕೊಡವ ಭಾಷಿಕ ಜನಾಂಗದವರ ಬಗ್ಗೆ ನೀಡಿರುವ ಬಾಲಿಶ ಹೇಳಿಕೆಯನ್ನು ನಾಚಪ್ಪರವರು ತಕ್ಷಣ ಹಿಂಪಡೆಯಬೇಕು. ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ಇದು ಹೀಗೆ ಮುಂದುವರೆದರೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸುಭಾಷ್ ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.