ಸಕ್ಕರೆಮುಕ್ತ ಬೇಕರಿ ಪದಾರ್ಥ ತಯಾರಿಕೆಗೆ ಸಂಶೋಧನೆ: ಯುಎಎಸ್​​​-ಬಿ ಕುಲಪತಿ ಹೇಳಿಕೆ

gkvk bakery
Published on

ಬೆಂಗಳೂರು: ಸ್ಥೂಲಕಾಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೈದಾ ಹಾಗೂ ಸಕ್ಕರೆಮುಕ್ತ ಬೇಕರಿ ಪದಾರ್ಥ ತಯಾರಿಸಲು ಸಂಶೋಧನೆ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದರು.

ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ಆಯೋಜಿಸಿರುವ ‘ನವೀನ ಬೇಕರಿ ಉತ್ಪನ್ನಗಳ ಪ್ರದರ್ಶನ ಹಾಗೂ ಕೇಕ್ ಮೇಳ’ಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ದೇಶದಲ್ಲಿ ಅತಿಯಾದ ಸಕ್ಕರೆ ಬಳಕೆಯಿಂದ ಶೇ.13.85 ಜನರಲ್ಲಿ ಸ್ಥೂಲಕಾಯ, ಶೇ.8.3 ಮಂದಿಗೆ ಸಕ್ಕರೆ ಕಾಯಿಲೆ ಹಾಗೂ ಶೇ.7.4 ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಹಜವಾಗಿಯೆ ಜನರು ತಮಗೆ ಅರಿವಿಲ್ಲದೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬೇಕರಿ ಉತ್ಪನ್ನಗಳಲ್ಲಿ ಸಕ್ಕರೆ ಬದಲು ಜೇನುತಪ್ಪವನ್ನು ಬಳಸುವ ಕುರಿತು ಆಲೋಚನೆ ನಡೆದಿದೆ ಎಂದರು.

ವಿವಿಯಿಂದ ಸಿರಿಧಾನ್ಯಗಳನ್ನು ಬಳಸಿ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮಹಿಳೆಯರು ಹಾಗೂ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸಲು ಪೌಷ್ಟಿಕ ಲಡ್ಡನ್ನು ತಯಾರಿಸಲಾಗುತ್ತಿದೆ. ಜತೆಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬೇಕರಿ ಉದ್ಯಮವು ಉತ್ತಮ ವೇದಿಕೆಯಾಗಿದೆ. ಕ್ಲೌಡ್ ಕಿಚನ್ ರೀತಿ ಕ್ಲೌಡ್ ಬೇಕರಿ ನಿರ್ಮಿಸಿ ನವೋದ್ಯಮಕ್ಕೆ ನಾಂದಿಯಾಡಬಹುದಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ, ಸಂಶೋಧನಾ ನಿದೇರ್ಶಕ ಡಾ. ಎಚ್.ಎಸ್.ಶಿವರಾಮು, ಸಹ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ.ರಘುಪ್ರಸಾದ್ ಹಾಜರಿದ್ದರು.

ತರಬೇತಿ ಪಡೆದವರಿಂದ ಉತ್ಪನ್ನ ತಯಾರು:

ವಿವಿಯಿಂದ 14 ವಾರದ ಬೇಕರಿ ತಂತ್ರಜ್ಞಾನ ಕುರಿತು ಸರ್ಟಿಫಿಕೇಟ್ ಪಡೆದ 32 ವಿದ್ಯಾರ್ಥಿಗಳಿಂದ 80ಕ್ಕೂ ಹೆಚ್ಚು ವಿಧದ ಉತ್ಪನ್ನಗಳನ್ನು ತಯಾರಿಸಿ ಪ್ರದರ್ಶನಕ್ಕಿಡಲಾಗಿತ್ತು. ಜತೆಗೆ 30 ಬಗೆಯ ಅಲಂಕಾರಿಕೆ ಕೇಕ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮೈದಾ ರಹಿತ ಚಾಕೊಲೇಟ್ ಬೆಣ್ಣೆ ಬಿಸ್ಕತ್, ತೆಂಗಿನಕಾಯಿ ಸ್ಟಫ್​​ ಬಿಸ್ಕತ್, ಡ್ರೈ ಫ್ರೂಟ್ಸ್ ಸ್ಟಫ್​​ ರೋಲ್, ರೆಡ್ ವೆಲ್ವೆಟ್ ಸ್ವಿಸ್ ರೋಲ್, ಸ್ಟ್ರಾಬೆರಿ ಕುಕೀಸ್, ರಾಗಿ ಜಾಗರಿ ಬಿಸ್ಕತ್, ರಾಗಿ ಬೀಟ್ರೂಟ್ ಕೇಕ್ ಇತ್ಯಾದಿ ಪದಾರ್ಥಗಳನ್ನು ಪ್ರದರ್ಶಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net