

ಮೈಸೂರು: ಗುರಿ ಇಟ್ಟುಕೊಂಡು ಸಂಶೋಧನೆ ಮಾಡುವ ಜತೆಗೆ ಮಾಡಿದ ಸಂಶೋಧನೆಗಳು ಸಮಾಜಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಪ್ರಾಧ್ಯಾಪಕಿ ಡಾ.ಜ್ಯೋತಿ ಸಲಹೆ ನೀಡಿದರು.
ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಪರಿಶಿಷ್ಠ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ 10 ದಿನಗಳ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸಂಶೋಧನೆ ಎಂದರೆ ಹೊಸ, ಹೊಸ ಆವಿಷ್ಕಾರ ಮಾಡುವುದಾಗಿದ್ದು, ಸ್ಕಾಲರ್‌ಶಿಪ್‌ಗೋಸ್ಕರ ಸಂಶೋಧನೆ ಮಾಡುವುದಲ್ಲ. ಮೂರೂವರೆ ವರ್ಷದಲ್ಲಿ ಸಂಶೋಧನೆ ಮುಗಿಸಬೇಕು. ಹೆಚ್ಚಾಗಿ ಅರಣ್ಯಾಧಾರಿತ ಬುಡಕಟ್ಟು ಜನರ ಸಮಸ್ಯೆ ಬಗ್ಗೆ ಸಂಶೋಧನೆ ಮಾಡಬೇಕು. ಮಾರ್ಗದರ್ಶಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಈ ಕಾರ್ಯಾಗಾರದಿಂದ ಸಂಶೋಧನೆ ಮಾಡುವ ಸಾಮರ್ಥ್ಯ ನಿಮಗೆ ಬಂದಿದೆ. ಇನ್ನೂ ಹೆಚ್ಚು ಕಾರ್ಯಕ್ರಮಗಳು ಸಂಸ್ಥೆಯಲ್ಲಿ ನಡೆಯಲಿ ಎಂದರು.
ಸಂಶೋಧಕರ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿದ್ದು, ಸಂಶೋಧಕರು ಗುರಿ ಇಟ್ಟುಕೊಂಡು ಸಂಶೋಧನೆ ಮಾಡಿ ಮುಗಿಸುವುದರ ಜತೆಗೆ ನೀವು ಮಾಡುವ ಸಂಶೋಧನೆ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ರಮಣಯ್ಯ ಮಾತನಾಡಿ, ಇಂತಹ ತರಬೇತಿ ಕಾರ್ಯಾಗಾರಗಳಿಗೆ ಮಾರ್ಗದರ್ಶಕರು (ಗೈಡ್‌ಗಳು) ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಸಂಶೋಧನೆ ಮಾಡಿರುವ ಗೈಡ್‌ಗಳಿಗೂ ತರಬೇತಿ ನೀಡಬೇಕು. ಜೀವನಪೂರ್ತಿ ಕಲಿಯುವುದರ ಜತೆಗೆ ಓದುವುದು ನಿರಂತರವಾಗಿರಬೇಕು. ಪಿಎಚ್.ಡಿ ಮಾಡುವುದರ ಮುಂಚೆ ಸಂಶೋಧಕರಿಗೆ ತರಬೇತಿ ನೀಡಿದರೆ ಸಂಶೋಧಕರು ಉತ್ತಮವಾದ ವಿಷಯ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮಾತನಾಡಿ, ಸಂಶೋಧಕರು ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತರಬೇತಿ ಕೇಳಿದ್ದೀರಿ. ಹಾಡಿಗಳಿಗೆ ಹೆಚ್ಚು ದಿನ ಭೇಟಿ ಮಾಡಲು ಅವಕಾಶ ಕೇಳಿದ್ದು ತಾವು ನೀಡಿರುವ ಸಲಹೆಗಳನ್ನು ಮುಂಬರುವ ಕಾರ್ಯಾಗಾರಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಈ ಕಾರ್ಯಾಗಾರ ಯಶಸ್ವಿಯಾಗುವುದು ಇಲ್ಲಿ 10 ದಿನ ಕಲಿತಿರುವುದನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಾ, ಈ ಕಾರ್ಯಾಗಾರದಿಂದ ನಮಗೆ ಆತ್ಮಸ್ಥೈರ್ಯ ಹೆಚ್ಚಾಗಿದೆ. ಏನು ತಿಳಿವಳಿಕೆ ಇಲ್ಲದ ನಮಗೆ ಇಲ್ಲಿ ತುಂಬಾ ಜ್ಞಾನವನ್ನು ಪಡೆದಿದ್ದೇವೆ. ಅತ್ಯುತ್ತಮ ಸಂಶೋಧನಾ ಅಭ್ಯರ್ಥಿಯಾಗಿ ಹೊರಹೊಮ್ಮಲು ಈ ಕಾರ್ಯಾಗಾರ ಅನುಕೂಲವಾಗಿದೆ ಎಂದು ಹೇಳಿದರು.
ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದಿದ್ದೇವೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಟ್ಟಿದ್ದೀರಿ. 10 ದಿನಗಳ ಕಾಲ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೀರಿ. ಆಯೋಜಕರಾದ ಬಿ.ಎಸ್.ಪ್ರಭಾರವರ ತಂಡಕ್ಕೆ ಧನ್ಯವಾದ ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ವೆಂಕಟೇಶ್‌ಕುಮಾರ್ ಮಾತನಾಡಿದರು. ಸಂಶೋಧನಾಧಿಕಾರಿ ಕೆ.ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೋಹನ್‌ಕುಮಾರ್, ಡಾ.ಮಂಜುನಾಥ್, ಡಾ. ರವಿಕುಮಾರ್, ಡಾ.ಕಲಾವತಿ, ಡಾ.ವಿ.ಜೆ. ಗಿರೀಶ್, ಬಿ.ಆರ್.ಭವ್ಯಾ, ರಮೇಶ್, ವೇಣುಕಾಂತ, ಗಂಗಾಧರಯ್ಯ, ಹೇಮಚಂದ್ರ, ಡಾ. ವೆಂಕಟೇಶ್‌ಪ್ರಸಾದ್, ಗುಣಧರ್, ಪುಷ್ಪಲತಾ, ದಾಕ್ಷಾಯಿಣಿ, ಪಿ.ಮಮತಾ ಇತರರಿದ್ದರು.