

ಸಾಂಸ್ಕೃತಿಕ ಇತಿಹಾಸವನ್ನು ಹೊಸ ದೃಷ್ಟಿಕೋನದಲ್ಲಿ ಅರಿಯಲು ಹಾಗೂ ಸಂಶೋಧನೆಗಳನ್ನು ನಡೆಸಲು ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎಚ್.ಎಸ್.ಪ್ರಭಾಕರ್ ಹೇಳಿದರು.
ಮಾನಸಗಂಗೋತ್ರಿಯ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ಇತಿಹಾಸ ಅಧ್ಯಯನ ವಿಭಾಗವು ಗುರುವಾರ ಆಯೋಜಿಸಿದ್ದ 28ನೇ ಇತಿಹಾಸ ಪುನಶ್ಚೇತನ ಶಿಬಿರದಲ್ಲಿ ಸಾಂಸ್ಕೃತಿಕ ಅಧ್ಯಯನದ ಹೊಸ ದೃಷ್ಟಿಕೋನ ಕುರಿತು ಮಾತನಾಡಿದರು.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಾದರಿ ಹಾಗೂ ಪರಿಭಾಷೆ ಬದಲಾಗಬೇಕಿದೆ. ಜತೆಗೆ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಕಾರ ಮತ್ತಷ್ಟು ಹೆಚ್ಚಬೇಕಿದೆ ಎಂದರು. ಇತಿಹಾಸ ತಜ್ಞರು ಎಲ್ಲ ವಿಷಯಗಳ ಜ್ಞಾನವೂ ಇರಬೇಕು. ಗಡಿಯನ್ನು ಹಾಕಿಕೊಳ್ಳಬಾರದು. ಸಮಾಜಶಾಸ್ತ್ರ, ವಿಜ್ಞಾನ, ಭೂಗೋಳ ಎಲ್ಲದರ ಪರಿಚಯವೂ ಇರಬೇಕು ಎಂದರು.
ಕೇಂದ್ರದ ನಿರ್ದೇಶಕಿ ಪ್ರೊ.ಎಸ್.ಎಸ್.ಮಾಲಿನಿ, ಇತಿಹಾಸ ಅಧ್ಯಯನ ವಿಭಾಗದ ಪ್ರೊ.ಜಿ.ಟಿ.ಸೋಮಶೇಖರ್, ಶಿಬಿರದ ಸಂಯೋಜಕ ಪ್ರೊ.ಕೆ.ಸದಾಶಿವ ಇದ್ದರು.