

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‌ಎಸ್‌ಆರ್) ಪ್ರಾಯೋಜಿತ ಹತ್ತು ದಿನಗಳ ಸಮಾಜ ವಿಜ್ಞಾನದ ಸಂಶೋಧನಾ ವಿಧಾನ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜಗಾಂಧಿ ಮಾತನಾಡಿ, ಐಸಿಎಸ್‌ಎಸ್‌ಆರ್ ನಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಶೋಧನಾ ಮಂಡಳಿಗಳಿಂದ ಅನುದಾನ ತಂದು ಈ ರೀತಿಯ ವಿಶೇಷ ಕಾರ್ಯಾಗಾರ ಮತ್ತು ವಿಚಾರಗೋಷ್ಠಿ ಆಯೋಜಿಸುತ್ತಿರುವುದು ಶ್ಲಾಘಮೀಯ ಕಾರ್ಯ. ಇಂತಹ ಕಾರ್ಯಕ್ರಮಗಳಿಂದ ವಿಶ್ವವಿದ್ಯಾಲಯ ನ್ಯಾಕ್ ಉತ್ತಮ ಶ್ರೇಣಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ಮಾತನಾಡಿ, ಐಸಿಎಸ್‌ಎಸ್‌ಆರ್ ಸಂಯೋಜಿತ ಕಾರ್ಯಾಗಾರಗಳನ್ನು ವಿಶ್ವವಿದ್ಯಾಲಯದಲ್ಲಿ ಆಯೋಜಿಸುವುದರಿಂದ ವಿವಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವುದಲ್ಲದೇ ದೇಶದ ಸಂಶೋಧನಾ ವಿದ್ಯಾರ್ಥಿಗಳಿಗೂ ಪ್ರಯೋಜನವಾಗುತ್ತದೆ ಎಂದು ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ್, ಪರೀಕ್ಷಾಂಗ ಕುಲಸಚಿವ ಡಾ.ಎಚ್. ವಿಶ್ವನಾಥ್, ಡೀನ್ (ಅಧ್ಯಯನ ಕೇಂದ್ರ) ಪ್ರೊ.ಎಂ. ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ. ಎಸ್. ನಿರಂಜನ್‌ರಾಜ್, ಕಾರ್ಯಾಗಾರದ ನಿರ್ದೇಶಕಿ ಪ್ರೊ. ಆರ್.ಎಚ್. ಪವಿತ್ರಾ, ಸಮಾಜವಿಜ್ಞಾನ ನಿಕಾಯದ ಅಧ್ಯಕ್ಷ ಪ್ರೊ. ಶಂಕರನಾರಾಣಪ್ಪ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಎಸ್.ರಮಾನಂದ ಇತರರು ಇದ್ದರು.