ತಂತ್ರಜ್ಞಾನ ಬಳಸಿ ಔಷಧ ಸಂಶೋಧಿಸಿ: ಕುಲಸಚಿವ ಪ್ರೊ.ಬಸಪ್ಪ, ವಿದ್ಯಾರ್ಥಿಗಳಿಗೆ ಸಲಹೆ

1
Published on

ಮೈಸೂರು: ನೂತನ ತಂತ್ರಜ್ಞಾನ ಬಳಸಿಕೊಂಡು ಮಾರಣಾಂತಿಕ ಕಾಯಿಲೆಗಳಿಗೆ ಔಷಧ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಬಸಪ್ಪ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಸಾಯನ ವಿಜ್ಞಾನದ ಹೊಸ ನೋಟಗಳು ವಿಚಾರ ಸಂಕಿರಣದಲ್ಲಿ ಔಷಧದಲ್ಲಿ ರಸಾಯನಿಕ ಜೀವ ವಿಜ್ಞಾನ ಕುರಿತು ಅವರು ಮಾತನಾಡಿದರು.
ಇತ್ತೀಚಿನ ಹೊಸ ತಂತ್ರಜ್ಞಾನಗಳು ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಿವೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಔಷಧಗಳನ್ನು ಸಂಶೋಧಿಸಬೇಕಿದೆ. ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ತಂತ್ರಜ್ಞಾನಗಳು ಇತ್ತೀಚೆಗೆ ವಿಶ್ವವನ್ನು ಪ್ರವೇಶಿಸಿವೆ. ಇದರಿಂದ ಉದ್ಯೋಗ ಸಿಗುವುದಿಲ್ಲ ಎನ್ನುವ ಆತಂಕ ಬೇಡ. ತಂತ್ರಜ್ಞಾನ ಮುಂದುವರಿದರೂ ಪ್ರಯೋಗಗಳಿಗೆ, ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಬೇಕೇಬೇಕಿದೆ. ವಿಜ್ಞಾನಿಗಳ ಹೊಸ ತಂತ್ರಜ್ಞಾನಗಳ ಸಹಕಾರವನ್ನೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಬದಲಾದ ಜೀವನಶೈಲಿ, ಕ್ಯಾನ್ಸರ್ ಕಾರಕಗಳ ಸೇವನೆಯಿಂದ ರೋಗವನ್ನು ಜನರು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಔಷಧ ವಿಜ್ಞಾನ ಕ್ಷೇತ್ರ ಬೆಳೆಯಲು ರಸಾಯನ ವಿಜ್ಞಾನಿಗಳು ಕೈ ಜೋಡಿಸಬೇಕಿದೆ. ರೋಗಕ್ಕೆ ಕಾರಣವೇನು? ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಅನುಸರಿಸಬೇಕಾದ ಮಾರ್ಗಗಳು ಯಾವುವು ಎಂಬುದನ್ನು ಅರ್ಥೈಸಿಕೊಂಡು ಪ್ರಯೋಗ ನಡೆಸಬೇಕು. ಹೊಸ ರಾಸಾಯನಿಕ ವಸ್ತು ಕಂಡು ಹಿಡಿದರೆ, ಅದರ ಬಳಕೆ, ಉಪಯೋಗದ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದರು.
ಮಾನವನ ದೇಹದಲ್ಲಿ ಎಷ್ಟು ಅಂಗಗಳಿವೆಯೋ ಅದಕ್ಕೆಲ್ಲದಕ್ಕೂ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಮಹಿಳೆಯರು ಸ್ತನ, ಗರ್ಭಕೋಶ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಪೀಡಿತರ ಸಂಖ್ಯೆಯೂ ಹೆಚ್ಚುತ್ತಿದೆ. ಕ್ಯಾನ್ಸರ್ ಕುರಿತ ಅಧ್ಯಯನ, ಸಂಶೋಧನೆ, ವರ್ತಮಾನದ ಸವಾಲುಗಳನ್ನು ತಿಳಿಯುವ ಕುತೂಹಲ ವಿದ್ಯಾರ್ಥಿಗಳಿಗೆ ಇರಬೇಕು ಎಂದು ತಿಳಿಸಿದರು.
ಔಷಧ ವಿಜ್ಞಾನ ಕ್ಷೇತ್ರವು ಬೃಹತ್ತಾಗಿ ಬೆಳೆಯುತ್ತಿದ್ದು, ರಸಾಯನ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯತ್ತ ಹೆಚ್ಚು ತೊಡಗಿಸಿಕೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಓದುವಾಗಲೇ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಬೇಕು. ಜಾಗತಿಕವಾಗಿ ಹೆಸರಾದ ವಿವಿಧ ವಿಶ್ವವಿದ್ಯಾಲಯಗಳ ಜರ್ನಲ್‌ಗಳನ್ನು ತಪ್ಪದೇ ನಿತ್ಯ ಓದಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎನ್.ಮೋಹನ, ಡಾ.ಜಿ.ನಾಗರಾಜು, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ, ಶೈಕ್ಷಣಿಕ ಡೀನ್ ರೇಚಣ್ಣ, ಸಂಚಾಲಕ ಎಸ್.ಸುಬ್ರಹ್ಮಣ್ಯ ರಾಜ್ ಅರಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net