

ವಿಜಯಪುರ: ಸಂಶೋಧನಾ ಲೇಖನಗಳು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಬೆಳಕಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ ಹೇಳಿದರು.
ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಐಸಿಎಸ್ಎಸ್ಆರ್ ಸಹಯೋಗದಲ್ಲಿ ಹತ್ತು ದಿನಗಳ ಸಮಗ್ರ ಸಾಮಾಜಿಕ ವಿಜ್ಞಾನ ವಿಶ್ಲೇಷಣೆಗಾಗಿ ಸಂಶೋಧನಾ ವಿಧಾನ ತಂತ್ರಗಳು ಕುರಿತ ಸಂಶೋಧನಾ ವಿಧಾನ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಸಂಶೋಧನೆ ಅತ್ಯಂತ ಪ್ರಮುಖವಾಗಿದೆ. ಗುಣಮಟ್ಟದ ಸಂಶೋಧನಾ ಲೇಖನಗಳು ಹೊಸ ತಿಳಿವಳಿಕೆ ನೀಡುವ ಜತೆಗೆ ವಿದ್ಯಾರ್ಥಿಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ತಜ್ಞರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತವೆ. ನಿರಂತರ ಅಧ್ಯಯನ ಮತ್ತು ವಿಶ್ಲೇಷಣೆ ಮೂಲಕ ಸಂಶೋಧಕರು ತಮ್ಮ ಕೌಶಲ ವೃದ್ಧಿಸಿಕೊಳ್ಳುವ ಜತೆಗೆ ಶೈಕ್ಷಣಿಕ ೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಪರಿಚಯಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಸಂಶೋಧಕರು ತಮ್ಮ ಸಂಶೋಧನಾ ಕೌಶಲ ಪರಿಷ್ಕರಿಸಲು ಮತ್ತು ಶೈಕ್ಷಣಿಕ ೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಸಂಶೋಧನೆಯಲ್ಲಿ ಎದುರಾಗುವ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಶಿಬಿರಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡು ತಮ್ಮ ಕೌಶಲ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಯೋಜಕಿ ಪ್ರೊ. ಅನಿತಾ ನಾಟೇಕರ ಸ್ವಾಗತಿಸಿದರು. ಅಶ್ವಿನಿ ತೊರವಿ ನಿರೂಪಿಸಿದರು. ಸಹ ಸಂಯೋಜಕ ಡಾ. ಚಂದ್ರಶೇಖರ ಮಠಪತಿ ವಂದಿಸಿದರು.