ಮಳೆಗಾಲದ ಆಪತ್ಬಾಂಧವ ಶೌರ್ಯಪಡೆ!: ಎನ್‌ಡಿಆರ್‌ಎಫ್ ಗುಣಮಟ್ಟದ ಕಾರ್ಯವೈಖರಿ : ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಮುಂಚೂಣಿ

New Project (15)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಪ್ರತಿ ಮಳೆಗಾಲದಲ್ಲೂ ಉಂಟಾಗುವ ಭೂಕುಸಿತ, ನೆರೆ ಹಾವಳಿ, ಮರ ಉರುಳುವಿಕೆಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ತೊಂದರೆಗೊಳಗಾದವರಿಗೆ ಆಪತ್ಬಾಂಧನವನಾಗುತ್ತದೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಇಲಾಖೆ ಜಾಗೃತ ಸ್ಥಿತಿಯಲ್ಲಿದ್ದರೂ ತುರ್ತು ಅಪಾಯ ಎದುರಾದಾಗ ತಕ್ಷಣವೇ ಧಾವಿಸುವ ಶೌರ್ಯ ವಿಪತ್ತು ನಿರ್ವಹಣಾ ತಂಡ ಎನ್‌ಡಿಆರ್‌ಎಫ್ ಮಟ್ಟಕ್ಕೆ ಕಾರ್ಯನಿರ್ವಹಿಸುವ ಮೂಲಕ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತದೆ. 2.54 ಲಕ್ಷ ವಿಪತ್ತು ನಿರ್ವಹಣೆ ಶೌರ್ಯ ತಂಡ ಐದು ವರ್ಷಗಳಲ್ಲಿ 2,54,076 ವಿಪತ್ತು ನಿರ್ವಹಣೆ ಕಾರ್ಯ ಮಾಡಿದೆ. ಮಳೆಗಾಲ ಹೊರತುಪಡಿಸಿ ಉಳಿದ ಸಮಯದಲ್ಲಿ ಸ್ವಯಂಸೇವಕರು ಸಾಮಾಜಿಕ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಐದು ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಸಾಮಾಜಿ ಚಟುವಟಿಕೆಗಳನ್ನು ಶೌರ್ಯ ತಂಡದ ಸದಸ್ಯರು ಕೈಗೊಂಡಿರುವುದು ಗಮನಾರ್ಹ. 2 ಕೋಟಿ ರೂ.ಮೌಲ್ಯದ ಸಲಕರಣೆ: ವಿಪತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ತಾಲೂಕು ಸಮಿತಿಗೆ ತಲಾ 2 ಲಕ್ಷ ರೂ. ನಂತೆ ಒಟ್ಟು 80 ತಾಲೂಕು ವಿಪತ್ತು ನಿರ್ವಹಣಾ ಸಮಿತಿಗಳಿಗೆ 2 ಕೋಟಿ ರೂ. ಮೌಲ್ಯದ ವಿಪತ್ತು ನಿರ್ವಹಣಾ ಪರಿಕರಗಳನ್ನು ಒದಗಿಸಲಾಗುತ್ತದೆ ಎಂದು ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್‌ಕುಮಾರ್ ಎಸ್.ಎಸ್. ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 91 ತಂಡ ಸಕ್ರೀಯ ಬೆಳ್ತಂಗಡಿ ತಾಲೂಕಿನಲ್ಲಿ ಚೊಚ್ಚಲವಾಗಿ ಆರಂಭವಾದ ಶೌರ್ಯ ತಂಡ ಇಂದು ರಾಜ್ಯದಲ್ಲಿ ವಿಪತ್ತು ಸಂಭವನೀಯ 91 ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ದ.ಕ, ಉ.ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರರ್ಗಿ, ಕಾಸರಗೋಡು, ಗದಗ, ಬೆಂಗಳೂರು ಗ್ರಾವಾಂತರ ಸಹಿತ 14 ಜಿಲ್ಲೆಗಳ 91 ತಾಲೂಕುಗಳಲ್ಲಿ ಶೌರ್ಯ ತಂಡ ರಚಿಸಲಾಗಿದೆ. ಪ್ರತಿ ತಾಲೂಕು ತಂಡಗಳು 100ರಿಂದ 200 ಹಾಗೂ ರಾಜ್ಯದಲ್ಲಿ ಒಟ್ಟು 10,470 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎನ್‌ಡಿಆರ್‌ಎಫ್ ತರಬೇತಿ ಮಳೆಗಾಲದ ಸಮಸ್ಯೆಗಳನ್ನು ಸಮರ್ಥ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸ್ವಯಂಸೇವಕರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯಿಂದ ತರಬೇತಿ ನೀಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಚೆನ್ನೈ ಮೂಲದ ಕಂಪನಿಯಿಂದ ಸ್ವಯಂಸೇವಕರಿಗೆ ಜೀವ ರಕ್ಷಣಾ ಕೌಶಲ ತರಬೇತಿ ನೀಡಲಾಗಿದೆ. ಶೌರ್ಯ ತಂಡದಲ್ಲಿ ಈಜು ತಜ್ಞರು, ಮುಳುಗು ತಜ್ಞರು, ಇತರ ಕೌಶಲವುಳ್ಳವರು ಇರುತ್ತಾರೆ.

ವಿಪತ್ತು ನಿರ್ವಹಣೆ ಉದ್ದೇಶ ಹೊಂದಿರುವ ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಐದು ವರ್ಷ ಪೂರೈಸಿರುವುದು ಸಂತಸ ತಂದಿದೆ. ಸ್ಥಳೀಯವಾಗಿ ಎದುರಾದ ವಿಪತ್ತುಗಳಿಗೆ ತಕ್ಷಣ ಧಾವಿಸಿ ನೆರವು ನೀಡುವುದು ಪ್ರಮುಖ ಉದ್ದೇಶ. ಯೋಜನೆಯಿಂದ ಸ್ಥಳೀಯರ ಸಹಭಾಗಿತ್ವದಲ್ಲಿ ವಿಪತ್ತು ನಿಯಂತ್ರಣಕ್ಕೆ ಸುಸಜ್ಜಿತ ತಂಡ ಮೂಡಿಬಂದಿದೆ. ವಿಪತ್ತು ನಿರ್ವಹಣಾ ಪಡೆ ವಿಪತ್ತಿನ ಸಮಯದಲ್ಲಿ ತಮ್ಮ ಶೌರ್ಯ ಮೆರೆಯುತ್ತಿರುವುದು ಆಪತ್ತಿನಲ್ಲಿರುವವರಿಗೆ ವರದಾನ. ಡಿ.ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ

  • 2020ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶೌರ್ಯ ತಂಡ ಸ್ಥಾಪನೆ.
  • 10 ಸಾವಿರಕ್ಕೂ ಅಧಿಕ ಸ್ವಯಂಸೇವಕರ ಕಾರ್ಯನಿರ್ವಹಣೆ
  • ಪ್ರತಿ ತಂಡದಲ್ಲೂ ನುರಿತ ತರಬೇತಿ ಸಿಬ್ಬಂದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net