ಮುರ್ಡೆಶ್ವರ ಕಡಲಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

BKL PRAVASIGA RAKSHANE
Published on

ಭಟ್ಕಳ: ಮುರ್ಡೆಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆಎನ್​ಡಿ ಸಿಬ್ಬಂದಿ, ಪೊಲೀಸ್ ಮತ್ತು ಲೈಫ್ ಗಾರ್ಡ್ ಅವರು ರಕ್ಷಣೆ ಮಾಡಿದ್ದಾರೆ.

ಮುರ್ಡೆಶ್ವರ ಪ್ರವಾಸಕ್ಕೆ ಆಗಮಿಸಿದ ಬೆಂಗಳೂರಿನ ನಿವಾಸಿ ಪುನೀತ್ ಕೆ. (19) ತನ್ನ ಸಹಚರರೊಂದಿಗೆ ಭಾನುವಾರ ಕಡಲಿನಲ್ಲಿ ಈಜಲು ತೆರಳಿದ್ದರು. ಈಜು ಬಾರದ ಪುನೀತ್ ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಕೆಎನ್​ಡಿ ಸಿಬ್ಬಂದಿ ಯೋಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಯೋಗೇಶನ ತಂದೆಯ ಪಾತಿ ದೋಣಿ ತೆಗೆದುಕೊಂಡು ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.

ಕಳೆದ ವಾರ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಬಂಧದ ಹೇರಲಾಗಿತ್ತು. ಶನಿವಾರ ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಆದರೆ, ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋರ್ಡ್, ಜೀವರಕ್ಷಕ ಸಾಮಗ್ರಿ ನೀಡಿರಲಿಲ್ಲ. ಇದರಿಂದಾಗಿ ಪುನೀತ್ ಮುಳುಗುವ ವೇಳೆ ಕೆಎನ್​ಡಿ ಸಿಬ್ಬಂದಿ ತನ್ನ ತಂದೆಯ ಪಾತಿದೋಣಿ ಮೂಲಕ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ. ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಾದರ ಏ. ಮಾರ್ಗದರ್ಶನದಲ್ಲಿ ಕೆಎನ್​ಡಿ ಸಿಬ್ಬಂದಿ, ಪೊಲೀಸ್​ನವರು ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net