ನದಿಯಲ್ಲಿ ಸಿಲುಕಿದವರ ರಕ್ಷಣೆ

ನದಿಯಲ್ಲಿ ಸಿಲುಕಿದವರ ರಕ್ಷಣೆ
Published on: 

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ಶನಿವಾರ ದಿಢೀರ್ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ತೆಪ್ಪ ನಡೆಸುವವರು ರಕ್ಷಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ಚಿಕ್ಕ ಮಗು ಸೇರಿ ಐವರು ಭರಚುಕ್ಕಿ ಜಲಪಾತಕ್ಕೆ ಬಂದಿದ್ದರು. ಜಲಪಾತ ವೀಕ್ಷಣೆ ಬಳಿಕ ಕುಟುಂಬ ಸಮೇತ ಜೀರೋ ಪಾಯಿಂಟ್‌ನ ನೀರು ಹರಿಯುವ ಬಂಡೆಗಳ ಮೇಲೆ ಹೋಗಿದ್ದರು. ಈ ವೇಳೆ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಶೇಖರಿಸಿದ್ದ ನೀರನ್ನು ದಿಢೀರನೇ ನದಿಗೆ ಹರಿಬಿಡಲಾಗಿದೆ. ಪರಿಣಾಮ ಪ್ರವಾಸಿಗರು ದಡಕ್ಕೆ ಬರಲಾಗದೆ ಬಂಡೆಗಳ ಬಳಿ ಸಿಲುಕಿದ್ದರು.

ಇದನ್ನು ಕಂಡ ತೆಪ್ಪ ನಡೆಸುವ ಶಾಂತರಾಜು, ಭೈರನಾಯಕ, ಗೋವಿಂದನಾಯ್ಕ ಇತರರು ತಕ್ಷಣ ತೆಪ್ಪ ಸಮೇತ ಧಾವಿಸಿ ನಡುನೀರಿನಲ್ಲಿ ಸಿಲುಕಿದ್ದವರನ್ನು ದಡಕ್ಕೆ ಕರೆತಂದು ಜೀವ ಉಳಿಸಿದ್ದಾರೆ.