ರೈಲ್ವೆ ಕಂಬಿ ಬ್ಯಾರಿಕೇಡ್‌ಗೆ ಸಿಲುಕಿದ ಕಾಡಾನೆ ರಕ್ಷಣೆ

ರೈಲ್ವೆ ಕಂಬಿ ಬ್ಯಾರಿಕೇಡ್‌ಗೆ ಸಿಲುಕಿದ ಕಾಡಾನೆ ರಕ್ಷಣೆ
Published on

ಸಿದ್ದಾಪುರ: ಕಾಫಿ ತೋಟದಿಂದ ಕಾಡಿಗೆ ತೆರಳುತ್ತಿದ್ದ ಕಾಡಾನೆಯೊಂದು ಆನೆ ತಡೆಗೆ ಅಳವಡಿಸಲಾಗಿದ್ದ ರೈಲ್ವೆ ಕಂಬಿಯ ಬ್ಯಾರಿಕೇಡ್‌ಗೆ ಸಿಲುಕಿ ರಾತ್ರಿ ಇಡೀ ಪರದಾಡಿದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಬಳಿ ನಡೆದಿದೆ.

ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ, ಅಬ್ಯತ್ತಮಂಗಲ, ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹಾಗೂ ಮೀನ್‌ಕೊಲ್ಲಿ, ದುಬಾರೆ ಅರಣ್ಯ ವ್ಯಾಪಿಯಲ್ಲಿ ಕಾಡಾನೆಗಳು ಬೀಡುಬಿಟ್ಟು, ಆಗಿಂದ್ದಾಗ್ಗೆ ಕಾಣಿಸಿಕೊಳ್ಳುತ್ತಿದ್ದವು. ಕೆಲವೆಡೆ ಕಾಡಾನೆಗಳು ರೈಲ್ವೆ ಬ್ಯಾರಿಕೇಡ್‌ಗಳನ್ನು ದಾಟಿಕೊಂಡು ಬಂದು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿದ್ದವು. ಅದೇ ರೀತಿ ಅಮ್ಮಂಗಾಲ ಬಳಿಯ ಕಾಫಿ ತೋಟದಿಂದ ದುಬಾರೆ ಅರಣ್ಯದತ್ತ ತೆರಳಲು ಹೋದ ಆನೆ ರೈಲ್ವೆ ಬ್ಯಾರಿಕೇಡ್‌ಗೆ ಸಿಲುಕಿ ಭಾನುವಾರ ರಾತ್ರಿ ಇಡೀ ನರಳಾಡಿದೆ.

ಸೋಮವಾರ ಬೆಳಗ್ಗೆ ಕಾರ್ಮಿಕರು ಕಾಡಾನೆಯನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಲಯ ಅರಣ್ಯ ಅಧಿಕಾರಿ ರತನ್‌ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ರೈಲ್ವೆ ಕಂಬಿಯನ್ನು ಸಡಿಲಗೊಳಿಸಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net