ಚಾರಣದಲ್ಲಿ ದಾರಿ ತಪ್ಪಿದ್ದ ವಿದ್ಯಾರ್ಥಿಗಳ ರಕ್ಷಣೆ

ckm 10
Published on

ಬಣಕಲ್: ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನದುರ್ಗ ಕಾಡಿನಲ್ಲಿ ಚಾರಣ ಹೋಗಿ ನಿತ್ರಾಣಗೊಂಡಿದ್ದ 10 ವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಚಿತ್ರದುರ್ಗದ ವಿವಿಧ ಕಾಲೇಜಿನ ಐವರು ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳ ಒಟ್ಟು 10 ಜನರ ತಂಡ ಟಿಟಿಯಲ್ಲಿ ಸೋಮವಾರ ಬೆಳಗ್ಗೆ ಪ್ರವಾಸ ಬಂದಿದ್ದರು. ಚಾರಣಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಾಗಿದ್ದ ಇವರು ಗೂಗಲ್ ಮ್ಯಾಪ್‌ನಲ್ಲಿ ಬಂಡಾಜೆ ಟ್ರೆಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣಕನ್ನಡ ಜಿಲ್ಲೆಯ ದಿಡುಪೆ ಮಾರ್ಗ ತೋರಿಸಿದೆ. ಅಲ್ಲಿಂದ ಚಾರಣ ಆರಂಭಿಸಿ ಬಂಡಾಜೆ ಜಲಪಾತದವರೆಗೆ ಹೋಗಿದ್ದಾರೆ.

ವಾಪಸ್ ಬರಲು ಬಲ್ಲಾಳ ರಾಯನದುರ್ಗ ಮತ್ತು ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ತಪ್ಪಿದ್ದಾರೆ. ನೆಟ್‌ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್ ಕೂಡ ಕೆಲಸ ಮಾಡಿಲ್ಲ. ವಿಷಯ ತಿಳಿದ ಬಾಳೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ದಿಲೀಪ್‌ಕುಮಾರ್, ಸ್ನೇಕ್ ಆರ್ೀ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಕಾಡಿಗೆ ಹೋಗಿ ಆರು ಗಂಟೆ ಹುಡುಕಾಟ ನಡೆಸಿದರು. ಸೋಮವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ವಿದ್ಯಾರ್ಥಿಗಳು ಸಿಕ್ಕಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದರು. ನಂತರ ಎಲ್ಲರನ್ನೂ ವಾಹನ ಹತ್ತಿಸಿ ಚಿತ್ರದುರ್ಗಕ್ಕೆ ಕಳಿಸಲಾಯಿತು.

10 ಸಿಕೆಎಂ 10:

ಮೂಡಿಗೆರೆ ತಾಲೂಕು ಬಲ್ಲಾಳ ರಾಯನದುರ್ಗ ಕಾಡಿನಲ್ಲಿ ಚಾರಣ ಹೋಗಿ ನಿತ್ರಾಣಗೊಂಡಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net