ರೈಲಿನ ಶೌಚಗೃಹದಲ್ಲಿ ಪ್ರಜ್ಞೆ ತಪ್ಪಿಬಿದ್ದಿದ್ದ ವೃದ್ಧೆಯ ರಕ್ಷಣೆ

mysore
Published on

ಮೈಸೂರು; ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲುಗಾಡಿಯ ಶೌಚಗೃಹದ ಒಳಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯನ್ನು ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಸಮಯ ಪ್ರಜ್ಞೆಯಿಂದ ರಕ್ಷಣೆ ಮಾಡಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಶ್ರೀನಿಧಿ ಮತ್ತು ಬಸವರಾಜ್ ಎಂಬ ವೃದ್ಧ ದಂಪತಿ ಮೈಸೂರಿನಿಂದ ಇತ್ತೀಚೆಗೆ ಪ್ರಯಾಣ ಕೈಗೊಂಡಿದ್ದರು. ರೈಲುಗಾಡಿ ಅರಸೀಕೆರೆ ನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆ ವೃದ್ಧೆ ಶ್ರೀನಿಧಿ ಅವರು ಶೌಚಕ್ಕೆಂದು ತೆರಳಿದರು. ಬಳಿಕ ಅವರು ಶೌಚ ಕೊಠಡಿಯಲ್ಲಿ ಪ್ರಜ್ಞೆತಪ್ಪಿ ಬಿದ್ದರು. ಕೆಲ ಹೊತ್ತು ಕಳೆದರೂ ಅವರು ಹೊರಗಡೆ ಬರಲಿಲ್ಲ.

ಇದರಿಂದಾಗಿ ಆತಂಕಗೊಂಡ ಪತಿ ಬಸವರಾಜ್ ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಸಿ.ಎಸ್.ಭಾಸ್ಕರ್ ಅವರಿಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಅವರು ಶೌಚಕೊಠಡಿಯ ಬಾಗಿಲಿನ ಕೆಳಭಾಗದ ಪ್ಲೇವುಡ್ ಶೀಟ್ ಮುರಿದು ಶ್ರೀನಿಧಿ ಅವರನ್ನು ಹೊರಕ್ಕೆ ತಂದರು. ಬಳಿಕ ರೈಲಿನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡಿದರು.


ಟಿಕೆಟ್ ತಪಾಸಣಾಧಿಕಾರಿ ಸಿ.ಎಸ್.ಭಾಸ್ಕರ್ ಅವರ ಸಮಯೋಚಿತ ನಡೆಗೆ ರೈಲ್ವೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಂಪತಿಯ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.


ಈ ವಿಷಯವನ್ನು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಯ ಆರೈಕೆಯಲ್ಲಿದ್ದ ನನ್ನ ತಾಯಿ ಊರಿಗೆ ಬರಲು ರೈಲಿನಲ್ಲಿ ಪ್ರಯಾಣಿಸುವಾಗ ಪ್ರಜ್ಞೆ ತಪ್ಪಿಹೋಗಿದ್ದಾರೆ. ಸಮಯ ಪ್ರಜ್ಞೆಯಿಂದ ನನ್ನ ತಾಯಿಯನ್ನು ಕಾಪಾಡಿದ ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಭಾಸ್ಕರ್ ಅವರ ನಡೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ರೈಲ್ವೆ ಇಲಾಖೆಯ ವ್ಯವಸ್ಥೆ ಮತ್ತಷ್ಟು ಹೆಮ್ಮೆ ಹೆಚ್ಚಿಸಿದೆ. ಮನೆಯಲ್ಲೇ ಚೇತರಿಕೆಯಿಂದ ತಾಯಿ ಆರೋಗ್ಯವಾಗಿದ್ದಾರೆ.
ಆರ್.ಬಿ.ಶಿವಕುಮಾರ್ (ಶ್ರೀನಿಧಿ ಮಗ) ಜೋಗ್ ಫಾಲ್ಸ್, ಶಿವಮೊಗ್ಗ

ವೃದ್ಧೆಯನ್ನು ಹೊರತರುವುದು ಸುಲಭದ ಕೆಲಸವಾಗಿರಲಿಲ್ಲ.

ಪ್ರಜ್ಞೆ ತಪ್ಪಿ ರೈಲುಗಾಡಿಯ ಶೌಚಗೃಹ ಕೊಠಡಿಯಲ್ಲಿ ಸಿಲುಕಿದ್ದ ವೃದ್ಧೆಯನ್ನು ಹೊರತರುವುದು ಸುಲಭದ ಕೆಲಸವಾಗಿರಲಿಲ್ಲ. ವೃದ್ಧೆ ಯಾವ ಭಾಗದ ಕಡೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂಬುದು ತಿಳಿಯದ ಪರಿಸ್ಥಿತಿಯಲ್ಲಿ ನಾವಿದ್ದೆವು. ಸ್ವಲ್ಪ ಯೋಚಿಸಿ ಕೊಠಡಿಯ ಕೆಳಭಾಗದ ಪ್ಲೇವುಡ್ ಶೀಟನ್ನು ಭಾಗಶಃ ಮುರಿಯುವ ಪ್ರಯತ್ನ ನಡೆಸಿ, ರೈಲಿನಲ್ಲಿದ್ದ ಪುಟ್ಟ ಹುಡುಗನೊಬ್ಬನಿಂದ ಕೊಠಡಿಯ ಒಳಗೆ ಅವರ ಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಕೂಡಲೇ ಹೊರತರುವ ಪ್ರಯತ್ನ ಮಾಡಲಾಯಿತು. ಇದಕ್ಕೆ ರೈಲ್ವೆ ಪ್ರಯಾಣಿಕರು ಕೈಜೋಡಿಸಿದ್ದು ಸಹಕಾರಿಯಾಯಿತು ಎಂದು ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಸಿ.ಎಸ್. ಭಾಸ್ಕರ್ ‘ವಿಜಯವಾಣಿ’ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net