ಮಣ್ಣಲ್ಲಿ ಹೂತುಹಾಕಿದ್ದ ಜೀವಂತ ಶಿಶು ರಕ್ಷಣೆ

Published on

ಸರ್ಜಾಪುರ : ನೆರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಿಗುಪ್ಪೆಯ ನೀಲಗಿರಿ ತೋಪಿನಲ್ಲಿ ಮಣ್ಣಲ್ಲಿ ಹೂತಿದ್ದ ನವಜಾತ ಶಿಶುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದೆ. ಸ್ಥಳೀಯರು ಬಹಿರ್ದೆಸೆಗೆಂದು ನೀಲಗಿರಿ ತೋಪಿಗೆ ಹೋದಾಗ ಮಗುವಿನ ಚೀರಾಟ ಕೇಳಿ ಬಂದಿದ್ದು, ಗುಂಡಿ ತೆಗೆದು ಮಗುವನ್ನು ಮುಚ್ಚಿರುವುದು ಕಂಡುಬಂದಿದೆ. ಕೂಡಲೇ ಮಕ್ಕಳ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿ ಮಗುವನ್ನು ರಕ್ಷಣೆ ಮಾಡಿ ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಣ್ಣಲ್ಲಿ ಹೂತಿದ್ದ ಗಂಡು ಮಗು ಮೇಲ್ನೋಟಕ್ಕೆ ಎರಡ್ಮೂರು ಗಂಟೆಗಳ ಹಿಂದಷ್ಟೇ ಜನಿಸಿರಬಹುದು. ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಗೆ ಒಪ್ಪಿಸಿದ್ದೇವೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನೆ: ಮಗು ಆರೋಗ್ಯವಾಗಿದೆ. ಮುಂದಿನ ಲಾಲನೆ ಪೋಷಣೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಲಾಗಿದೆ. ಮಗುವು ಬೇಡವಾದಲ್ಲಿ ನಮ್ಮ ಇಲಾಖೆಗೆ ಒಪ್ಪಿಸಿದರೆ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳುತ್ತದೆ. ಮಕ್ಕಳನ್ನು ಬಯಸುವವರಿಗೆ ಕಾನೂನಾತ್ಮಕವಾಗಿ ದತ್ತು ನೀಡಬಹುದು. ಆದರೆ ಈ ರೀತಿಯ ಘಟನೆಗಳು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಈ ರೀತಿ ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net