

ನೆಲಮಂಗಲ: ಸೊಂಡೇಕೊಪ್ಪ ಬಳಿಯ ನಾಗಸಂದ್ರದ ರೈತ ನರಸಿಂಹಮೂರ್ತಿ ಅವರ ತೋಟದಲ್ಲಿ ಕೃಷಿಹೊಂಡಕ್ಕೆ ಬಿದ್ದಿದ್ದ ಸುಮಾರು 2 ವರ್ಷದ ಹೆಣ್ಣು ಚಿರತೆಯನ್ನು ಬೆಂಗಳೂರು ವಲಯ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಭಾನುವಾರ ರಾತ್ರಿ ಚಿರತೆ ಕೃಷಿಹೊಂಡಕ್ಕೆ ಬಿದ್ದಿದ್ದು, ಸೋಮವಾರ ಬೆಳಗ್ಗೆ ಕೆಲಸಗಾರೊಬ್ಬರು ತೋಟಕ್ಕೆ ತೆರಳಿದಾಗ ಚಿರತೆ ಬಿದ್ದಿರುವುದು ಗೊತ್ತಾಗಿದೆ.
ತಕ್ಷಣ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಸತತ 3 ಗಂಟೆ ಕಾರ್ಯಚರಣೆ ನಡೆಸಿದ್ದು, ಬನ್ನೇರುಘಟ್ಟ ಜೈವಿಕ ಆರಣ್ಯದ ಅರಿವಳಿಕೆ ತಜ್ಞ ಡಾ.ಆನಂದ್ ಹಾಗೂ ಡಾ.ಕಿರಣ್ ಅರಿವಳಿಕೆ ನೀಡಿ ರಕ್ಷಣೆ ಮಾಡಿದರು.
ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದು, ಸುರಕ್ಷಿತವಾಗಿ ಬನ್ನೇರಘಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದು ಬೆಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಮಾಹಿತಿ ನೀಡಿದರು.
ಬೆಂಗಳೂರು ಉತ್ತರ ತಾಲೂಕು ವಲಯ ಅರಣ್ಯಾಧಿಕಾರಿ ಶಿವಪ್ಪಹೊಸಮನಿ, ಸಹಾಯಕ ಅರಣ್ಯಾಧಿಕಾರಿ ಗೋವಿಂದರಾಜು, ಸಿಬ್ಬಂದಿ ಶಿವಾನಂದಚೌಗಲಾ, ಹರೀಶ್, ಮಂಜುನಾಥ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ಸಿಬ್ಬಂದಿ ಮಧುಕುಮಾರ್, ಅರುಣ್‌ಗೌಡ ಇದ್ದರು.