

ಕಂಪಲಾಪುರ: ಮನೆ ಆವರಣದೊಳಗೆ ಬರಲು ಯತ್ನಿಸುತ್ತಿದ್ದ ನಾಗರಹಾವನ್ನು ಕಂಡ ಸಾಕುನಾಯಿ ಬೊಗಳಲು ಆರಂಭಿಸಿದರ ಪರಿಣಾಮ ಮನೆ ಮಾಲೀಕ ಎಚ್ಚೆತ್ತು ಮುಂದಾಗುವ ಅನಾಹುತ ತಪ್ಪಿಸಿದ್ದಾರೆ.
ಸ್ಥಳೀಯ ನಿವಾಸಿ ಮಹೇಂದ್ರ ಭಾನುವಾರ ಕೆಲಸ ಮುಗಿಸಿ ಆಯಾಸದಿಂದ ನಿದ್ರೆಗೆ ಜಾರಿದ್ದಾರೆ. ಅಲ್ಲದೆ ಎಂದಿನಂತೆ ಮನೆ ಮುಂದೆ ಸಾಕುನಾಯಿ (ಡಾಲಿ)ಯನ್ನು ಕಟ್ಟಿಹಾಕಿದ್ದಾರೆ. ಸಂಜೆ 4.30ರ ಸಮಯದಲ್ಲಿ ಗೋಡೆ ಪಕ್ಕದಿಂದ ಮನೆಯೊಳಗೆ ಭಾರಿ ಗಾತ್ರದ ನಾಗರಹಾವು ಬರಲೆತ್ನಿಸಿದ್ದು, ಇದನ್ನು ಕಂಡ ನಾಯಿ ಜೋರಾಗಿ ಬೊಗಳಲಾರಂಭಿಸಿದೆ.
ನಾಯಿ ಬೊಗಳುವ ಶಬ್ದಕ್ಕೆ ಹಾವು ಹೆಡೆ ಎತ್ತಿ ನೆಲಕ್ಕೆ ಕುಕ್ಕುತಿದ್ದರೆ, ಇತ್ತ ನಾಯಿ ಬೊಗಳುವುದನ್ನು ಗಮನಿಸಿದ ಮಹೇಂದ್ರ ಎದ್ದು ಹೊರ ಬಂದು ನೋಡಿದಾಗ ಹಾವು ಆವರಣದಲ್ಲಿ ಕಂಡಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಳಗ ಮುಂದುವರಿಯಿತು. ನಂತರ ಸ್ನೇಕ್ ಗಿರೀಶ್ ಅವರಿಗೆ ಕರೆ ಮಾಡಲಾಗಿ ಸ್ಥಳಕ್ಕಾಗಮಿಸಿದ ಗಿರೀಶ್, ನಾಗರಹಾವನ್ನು ಸುರಕ್ಷಿವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.