ಅಕ್ರಮವಾಗಿ ಸಾಗಿಸುತ್ತಿದ್ದ 44 ಜಾನುವಾರುಗಳ ರಕ್ಷಣೆ

Rescue of 44 cattle that were illegally transported
ಮುದ್ದೇಬಿಹಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಶನಿವಾರ ಠಾಣೆಯ ಆವರಣದಲ್ಲಿ ಕಟ್ಟುತ್ತಿರುವುದು.
Published on

ಮುದ್ದೇಬಿಹಾಳ: ತಾಲೂಕಿನ ತಂಗಡಗಿ ನೀಲಾಂಬಿಕೆ ದೇವಸ್ಥಾನದ ಬಳಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಎರಡು ಕಂಟೇನರ್ ಲಾರಿಗಳಲ್ಲಿ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕೊಪ್ಪಳ ತಾಲೂಕು ಗಿಣಿಗೇರಾದಿಂದ ಕಲಬುರ್ಗಿ ಕಡೆಗೆ ಹೊರಟಿದ್ದ ಎರಡು ಕ್ಯಾಂಟರ್‌ಗಳಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಬಂದ ತಕ್ಷಣ ಪಿಎಸ್‌ಐ ಆರೀಫ ಮುಶಾಪುರಿ ನೇತೃತ್ವದಲ್ಲಿ ಪೊಲೀಸರು, ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬಳಿಕ ಪೊಲೀಸ್ ಠಾಣೆಯ ಆವರಣದಲ್ಲಿ ಎಲ್ಲ ಜಾನುವಾರುಗಳನ್ನು ವಾಹನದಿಂದ ಕೆಳಗೆ ಇಳಿಸಲಾಯಿತು.

ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕುಷ್ಟಗಿ ತಾಲೂಕಿನ ರಫೀಕ ಹಿರೇಮನಿ, ಕಂದಕೂರ ಗ್ರಾಮದ ಮುರ್ತುಜಸಾಬ ಟೆಂಗುಂಟಿ, ಯಲಬಣಚಿ ಗ್ರಾಮದ ಭೀಮಶ್ಯಾ ಭಾವಿಗುರಿಕಾರ, ಜೂಲಕಟ್ಟಿಯ ಹಣಮಗೌಡ ಪೊಲೀಸಪಾಟೀಲ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ವಶಕ್ಕೆ ಪಡೆದಿರುವ ಜಾನುವಾರುಗಳನ್ನು ವಿಜಯಪುರ ಜಿಲ್ಲೆ ಕಗ್ಗೋಡದಲ್ಲಿರುವ ಶಾಸಕ ಯತ್ನಾಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗೋಶಾಲೆಗೆ ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net