

ಗುರುಗುಂಟ: ಗೌಡೂರು ಗ್ರಾಪಂ ವ್ಯಾಪ್ತಿಯ ಬಂಡೆಬಾವಿಯಲ್ಲಿ ಹೆಣ ಹೂಳಲು ಜಾಗವಿಲ್ಲದ ಸ್ಥಿತಿಯಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಆಧ್ದರಿಂದ ಬರಲಿರುವ ವಿಧಾನಸಭಾ ಚುನಾವಣೆ ವೇಳೆ ಮತದಾನದಿಂದ ದೂರ ಉಳಿಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಎಸ್ಸಿ, ಎಸ್ಟಿ, ಮುಸ್ಲಿಮರು, ಕುರುಬ ಸಮುದಾಯದ 210 ಕುಟುಂಬಗಳಿವೆ. ಜಮೀನಿದ್ದವರು ಸ್ವಂತ ಜಮೀನಿನಲ್ಲಿ ಶವ ಹೂಳಿಕೊಳ್ಳುತ್ತಾರೆ. ಬಡವರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಸಭೆಯಲ್ಲಿ ಸ್ಮಶಾನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಪರಿಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಅದು ಹುಸಿಯಾಗಿಸಿದೆ. ಒಂದು ವರ್ಷದ ಹಿಂದೆ ಲಿಂಗಸುಗೂರು ತಹಸೀಲ್ದಾರ್ ಬಂಡೇಭಾವಿಗೆ ಆಗಮಿಸಿ ಸ್ಥಳ ವೀಕ್ಷಿಸಿ ಹೋಗಿದ್ದರು. ಇನ್ನೂ ಭೂಮಿ ಮಂಜೂರಾಗಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಬೇಕು. ಇಲ್ಲವಾದಲ್ಲಿ ಶವದೊಂದಿಗೆ ಎಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜನ ಎಚ್ಚರಿಸಿದ್ದಾರೆ.
ಗುರುಗುಂಟ ಹೋಬಳಿಯ 22 ಹಳ್ಳಿಗಳಲ್ಲಿ ಬೇಡಿಕೆಯಂತೆ ಮುಸ್ಲಿಮರಿಗೆ ಖಬರಸ್ತಾನ, ಹಿಂದುಗಳಿಗೆ ರುದ್ರಭೂಮಿ ಮಂಜೂರು ಮಾಡಲಾಗಿದೆ. ಬಂಡೆಬಾವಿ, ರಾಮಲೂಟಿಯಲ್ಲಿ ಗೈರಾಣು ಭೂಮಿಯಿಲ್ಲ. ಆದ್ದರಿಂದ ತೊಂದರೆ ಆಗಿದೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮೀಪದ ಯರಜಂತಿಯ ಸ.ಸಂ. 120 ಅನ್ನು ಕಾಯ್ದಿರಿಸಲಾಗಿದೆ. ಬಂಡೇಬಾವಿಯಲ್ಲಿ ಯಾರಾದರೂ 20 ಗುಂಟೆ ಜಮೀನು ಮಾರಲು ಸಿದ್ಧವಾದರೆ ಸರ್ಕಾರದಿಂದ ಖರೀದಿಸಲಾಗುವುದು ಎಂದು ತಿಳಿಸುತ್ತಾರೆ ಗುರುಗುಂಟ ಕಂದಾಯ ನಿರೀಕ್ಷಕ ರಾಘವೇಂದ್ರ ಕೊಪ್ಪದ.