ಪ್ರಕರಣ ಹಿಂಪಡೆಯಲು ಆಗ್ರಹ

Published on

ಕುಮಟಾ: ಶಿರೂರ ಗುಡ್ಡ ಕುಸಿತ ಅವಘಡದಲ್ಲಿ ಸಂತ್ರಸ್ತರಿಗೆ ನ್ಯಾಯ ಕೋರಿ ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಿದ 8 ಜನರ ಮೇಲೆ ಪೊಲೀಸರು ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿಗಳು, ಪ್ರತಿಭಟನೆ ನಡೆಸದಂತೆ ಲಿಖಿತವಾಗಿ ತಿಳಿಸದೇ ನಂತರ ಪ್ರಕರಣ ದಾಖಲಿಸಿರುವುದು ಹೋರಾಟದ ಧ್ವನಿ ಅಡಗಿಸುವ ಉದ್ದೇಶದಂತಿದೆ. ಪೊಲೀಸರ ಕ್ರಮವನ್ನು ಖಂಡಿಸುತ್ತೇವೆ ಎಂದರು.

ಜಿಲ್ಲೆಯಲ್ಲಿ ಚತುಷ್ಪಥದ ಬಾಕಿ ಕಾಮಗಾರಿಯನ್ನು ಭೂವಿಜ್ಞಾನ ಸಮೀಕ್ಷಾ ವರದಿ ಶಿಫಾರಸಿನಂತೆ ಎಲ್ಲ ಮುಂಜಾಗ್ರತೆ ಕ್ರಮಗಳೊಂದಿಗೆ ಶೀಘ್ರ ಪುರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ವಸೂಲಾತಿ ನಿಲ್ಲಿಸಬೇಕು. ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕತೆಯಿಂದ ಉಂಟಾದ ಅವಘಡಗಳು, ಅಪಘಾತದ ಸಂತ್ರಸ್ತರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಎಚ್.ನಾಯ್ಕ, ಡಿ.ಎಚ್. ಪಟಗಾರ, ಯೋಗಾನಂದ ಗಾಂಧಿ, ಮಂಜು ನಾಯ್ಕ, ಸುಧಾಕರ ತಾರಿ, ಎಂ.ಟಿ.ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net