

ಬೆಳಗಾವಿ: ಘಟಪ್ರಭಾ ಬಲದಂಡೆ ಕಾಲುವೆ ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು 1722 ಕೋಟಿ ರೂ. ವೆಚ್ಚಕ್ಕೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಮಾನ್ಯ ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಉಪಸ್ಥಿಯಲ್ಲಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರನ್ನು ನವ-ದೆಹಲಿಯಲ್ಲಿ ಭೇಟಿ ಮಾಡಿ ವಿನಂತಿಸಿದರು.
ಪ್ರಸ್ತಾಪಿತ ಈ ಕಾಲುವೆಗಳು ಸುಮಾರು ಮೂರು ದಶಕಗಳ ಕಾಲದಷ್ಟು ಹಳೆಯದಾಗಿದ್ದು, ಇದರಿಂದಾಗಿ ರೈತರು ಹೊಂದಿದ ಜಮೀನುಗಳಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರು ಹರಿದು ಹೋಗದೆ ಇರುವುದರಿಂದ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.
ಈ ಕಾಲುವೆಗಳನ್ನು ನವೀಕರಿಸುವುದರೊಂದಿಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಡಿ ಬರುವಂತಹ ಅನೇಕ ಗ್ರಾಮಗಳಲ್ಲಿನ ಲಕ್ಷಾಂತರ ರೈತ ಬಾಂಧವರಿಗೆ ಅವರು ಹೊಂದಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ ಎಂದು ಸಂಸದರಾದ ಶ್ರೀ ಜಗದೀಶ ಶೆಟ್ಟರ ಹಾಗೂ ಗೋಕಾಕ ವಿಧಾನಸಭಾ ಸದಸ್ಯರಾಗಿ ಶ್ರೀ ರಮೇಶ ಜಾರಕಿಹೋಳಿ ಇವರು ತಿಳಿಸಿದರು.
ಈ ಯೋಜನೆಯ ಅಗತ್ಯತೆಯ ಅನುಗುಣವಾಗಿ ಸಲ್ಲಿಸಲಾದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ ಇವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಾರ್ಯಗತಗೊಳ್ಳಲಿರುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.