

ಶಿಗ್ಗಾಂವಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಅಭಿವೃಧಿ ನಿಗಮ, ಪ್ರತಿ ಜಿಲ್ಲೆಯಲ್ಲಿ ಸಹಸ್ರಾರ್ಜುನ ವೃತ್ತ ನಿರ್ಮಾಣ ಹಾಗೂ ಸರ್ಕಾರದಿಂದ ಸೋಮವಂಶ ಸಹಸ್ರಾರ್ಜುನ ಜಯಂತಿ ಆಚರಣೆ ಮಾಡುವಂತೆ ತಾಲೂಲಕು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸೇವಾ ಸಂಸ್ಥೆ ಸದಸ್ಯರು ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸೋಮವಂತ ಸಹಸ್ರಾರ್ಜುನ ತೃತೀಯ(ಸಾವಜಿ) ವಂಶದವರು ಸರ್ಕಾರಿ ಗೆಜೆಟ್ನಲ್ಲಿ ಪಟೆಗಾರ ಇದ್ದು, ಕರ್ನಾಟಕದಲ್ಲಿ ನಾವು ಅಂದಾಜು 16 ಲಕ್ಷ ಜನರಿದ್ದೇವೆ. ಅದರಲ್ಲಿ ಶೇ. 45 ಜನ ಕಡು ಬಡವರಾಗಿದ್ದು, ಸಮಾಜ ಬಾಂಧವರು ಶೈಕ್ಷಣಿಕ, ಆರ್ಥಿಕ, ರಾಜಕೀವಾಗಿ ಹಿಂದುಳಿದಿದ್ದಾರೆ.
ಸರ್ಕಾರ ಸಮಾಜದ ಏಳಿಗೆಗಾಗಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಅಭಿವೃದ್ಧಿ ನಿಗಮ ಮಂಡಳಿಯನ್ನು ಪ್ರತ್ಯೇಕವಾಗಿ ಸ್ಥಾಪಿಸಬೇಕು. ಹೆಚ್ಚಿನ ಅನುದಾನವನ್ನು ಮೀಸಲಿರಿಸುವ ಜತೆಗೆ ಸಮಾಜದ ಮೂಲ ಪುರುಷರಾದ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಆಚರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಶಿರಸ್ತೇದಾರ್ ಶಿಲ್ಪಾ ಅಳವಂಡಿ ಮನವಿ ಸ್ವೀಕರಿಸಿದರು. ಎಸ್ಎಸ್ಕೆ ಸಮಾಜದ ತಾಲೂಕು ಅಧ್ಯಕ್ಷ ಆನಂದ ದಾನಿ, ಮೋಹನ್ ಬದ್ದಿ, ಸೂರ್ಯಕಾಂತ ಕಾಟೆಗಾರ್, ವಿಕಾಸ ಬೇವಿನಕಟ್ಟಿ, ಗುರುನಾಥ ರಾಜೋಳ್ಳಿ, ಸುಭಾಷ ಕಾಟೆಗಾರ್, ರೇಖಾ ದಾನಿ, ರೂಪಾ ಕಾಟೆಗಾರ್, ಜ್ಯೋತಿ ಬದ್ದಿ, ನೇಹಾ ಕಾಟೆಗಾರ್ ಇತರರು ಇದ್ದರು.