

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲೊರಟಿರುವ ಯೋಜನೆಯನ್ನು ರಾಜ್ಯಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಮುಖಂಡರು, ರಾಜ್ಯಸರ್ಕಾರ ನಡೆ ಸರಿಯಲ್ಲ. ಈ ಯೋಜನೆಯಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ರವಾನಿಸಿದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮಗಳ ವ್ಯಾಪ್ತಿಯ 10 ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಬೇಕು. ಜತೆಗೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯು 2002ರಲ್ಲಿ ಅಳವಡಿಸಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಕಾರ್ಯತಂತ್ರದ ಅನ್ವಯ ಎಲ್ಲ ವನ್ಯಜೀವಿ ಪಕ್ಷಿ ಧಾಮದ ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯ ಘೋಷಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ. ಅದರಂತೆ ಹರಿಯಾಣ, ಗುಜರಾತ್, ಮಿಜೋರಾಂ, ಮೇಘಾಲಯ, ಅಸ್ಸಾಂ ಹಾಗೂ ಗೋವಾ ರಾಜ್ಯ ಮಾತ್ರ ಸೂಕ್ಷ್ಮ ವಲಯ ಘೋಷಣೆಗೆ ಮುಂದಾಗಿದ್ದವು. ಉಳಿದ ರಾಜ್ಯಗಳು ಹಿಂದೇಟು ಹಾಕಿದ್ದವು. ಹೀಗಾಗಿ 2006ರ ಡಿ. 4ರಂದು ತ್ವರಿತವಾಗಿ ಸೂಕ್ಷ್ಮವಲಯ ಘೋಷಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಈ ನಡುವೆ 2011ರ ಫೆ. 9ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ಇಂದಿಗೂ ಹಲವು ರಾಜ್ಯಗಳು ಸೂಕ್ಷ್ಮವಲಯ ಘೋಷಣೆಗೆ ಮುಂದಾಗಿಲ್ಲ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ಅನ್ವಯ ಸೂಕ್ಷ್ಮ ಪರಿಸರ ವಲಯ ಘೋಷಣೆ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪತ್ರ ಬರೆದಿದೆ. ಇನ್ನು ಶ್ರೀರಂಗಪಟ್ಟಣದ ರಂಗನ ತಿಟ್ಟು, ಅರಕೆರೆಯ ಗೆಂಡೆ ಹೊಸಹಳ್ಳಿ ದ್ವೀಪಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮಪರಿಸರ ವಲಯ ಎಂದು ಘೋಷಣೆ ಮಾಡಿ ವಿಶೇಷ ಗೆಜೆಟ್ ನಲ್ಲಿ ಘೋಷಣೆ ಮಾಡಿದೆ. ಜತೆಗೆ ಈ ವಲಯದ 10 ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆ ಮಾಡುವುದು ನಿಷೇಧ. ಕ್ವಾರಿ, ಜಲ್ಲಿ ಕ್ರಷರ್, ಕೈಗಾರಿಕೆ, ವಾಣಿಜ್ಯ ಹೋಟೆಲ್, ಸಾಮಿಲ್ ಸ್ಥಾಪಿಸುವಂತಿಲ್ಲ. ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೂ ನಿಷೇಧ ಹೇರಲಾಗಿದೆ ಎಂದು ಮಾಹಿತಿ ನೀಡಿದರು.
ಆದರೂ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ ನಿರ್ಮಾಣ ಮಾಡ ಹೊರಟಿರುವುದು ಖಂಡನೀಯ. ಈ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಟಿ.ನರಸೀಪುರದ 19 ಗ್ರಾಮ ಸೇರುತ್ತವೆ. ರಂಗನತಿಟ್ಟು ಕನ್ನಡಿಗರ ಹೆಮ್ಮೆ. ದೇಶವಿದೇಶದಿಂದ ಸಾವಿರಾರು ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತವೆ. ಮಾತ್ರವಲ್ಲದೆ ಒಳ್ಳೆ ಪ್ರವಾಸಿ ತಾಣವು ಆಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಅದಾಯವಿದೆ. ಕನ್ನಂಬಾಡಿ ಕಟ್ಟೆ ಮಂಡ್ಯ ಅನ್ನದಾತರ ಪಾಲಿಗೆ ಜೀವನದಿಯಾಗಿದೆ. ಈ ಕಟ್ಟೆ ಏಕಶಿಲಾ ಪದರದ ಮೇಲೆ ನಿಂತಿದೆ. ಆದ್ದರಿಂದ ಯೋಜನೆ ಬಗ್ಗೆ ಕಳವಳ ವ್ಯಕ್ತವಾಗಿದೆ. ರೈತರು ಈ ಯೋಜನೆಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆದ್ದರಿಂದ ಯೋಜನೆಯನ್ನು ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಸ್ಥಳಾಂತರಿಬೇಕು. ಇದರಿಂದಾಗಿ ಆ ಭಾಗದ ಪ್ರವಾಸೋದ್ಯಮ ಬೆಳೆಯುವುದರ ಜತೆಗೆ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಪ್ರಸನ್ನಕುಮಾರ್, ನಂದೀಶ್, ಚಂದ್ರ ಇತರರಿದ್ದರು.